ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೆಚ್ಚುತ್ತಿರುವ ವಾಯುಮಾಲಿನ್ಯಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ದೆಹಲಿ ಸರ್ಕಾರ ಇಂದಿನಿಂದಲೇ ಕಠಿಣ ನಿರ್ಧಾರ ಜಾರಿಗೆ ತಂದಿದೆ. ರಾಷ್ಟ್ರ ರಾಜಧಾನಿಗೆ ಪ್ರವೇಶಿಸುವ ವಾಹನಗಳ ಮೇಲೆ ಹೊಸ ನಿರ್ಬಂಧ ಹೇರಲಾಗಿದ್ದು, BS-VI ಎಂಜಿನ್ ಹೊಂದಿರುವ ವಾಹನಗಳಿಗೆ ಮಾತ್ರ ದೆಹಲಿ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಹಳೆಯ ಮಾದರಿಯ ವಾಹನಗಳು ರಾಜಧಾನಿ ಗಡಿಯಲ್ಲಿ ತಡೆಯಲಾಗುತ್ತದೆ ಎನ್ನಲಾಗಿದೆ.
ಗುರುಗ್ರಾಮ್, ಗಾಜಿಯಾಬಾದ್, ಫರಿದಾಬಾದ್ ಹಾಗೂ ನೋಯ್ಡಾದಿಂದ ಪ್ರತಿದಿನ ದೆಹಲಿಗೆ ಪ್ರವೇಶಿಸುತ್ತಿದ್ದ ಸುಮಾರು 12 ಲಕ್ಷ ವಾಹನಗಳ ಮೇಲೆ ಈ ನಿರ್ಧಾರ ನೇರ ಪರಿಣಾಮ ಬೀರುವ ನಿರೀಕ್ಷೆಯಿದೆ. ವಿಶೇಷವಾಗಿ ನೋಯ್ಡಾದಿಂದ ನಾಲ್ಕು ಲಕ್ಷಕ್ಕೂ ಹೆಚ್ಚು, ಗುರುಗ್ರಾಮ್‌ನಿಂದ ಎರಡು ಲಕ್ಷ ಹಾಗೂ ಗಾಜಿಯಾಬಾದ್‌ನಿಂದ ಐದು ಲಕ್ಷಕ್ಕೂ ಅಧಿಕ ವಾಹನಗಳು ದೆಹಲಿ ಪ್ರವೇಶಿಸದಂತೆ ನಿರ್ಬಂಧಿಸಲಾಗುತ್ತದೆ ಎನ್ನಲಾಗಿದೆ.
ಈ ಕ್ರಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು 580ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ದೆಹಲಿಯ ವಿವಿಧ ಗಡಿಗಳಲ್ಲಿ 126 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದ್ದು, ಅಲ್ಲಿ 37 ಎನ್‌ಫೋರ್ಸ್‌ಮೆಂಟ್ ವ್ಯಾನ್‌ಗಳು ಕಾರ್ಯನಿರ್ವಹಿಸಲಿವೆ. ಸಾರಿಗೆ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಆಹಾರ ಇಲಾಖೆ ಸಿಬ್ಬಂದಿಯನ್ನೂ ಇಂಧನ ಕೇಂದ್ರಗಳಲ್ಲಿ ನಿಯೋಜಿಸಲಾಗಿದೆ. ಪಿಯುಸಿ ಪ್ರಮಾಣಪತ್ರವಿಲ್ಲದ ವಾಹನಗಳಿಗೆ ಪೆಟ್ರೋಲ್ ಹಾಗೂ ಡೀಸೆಲ್ ನೀಡದಂತೆ ಕೂಡ ಸೂಚಿಸಲಾಗಿದೆ.
ಪೆಟ್ರೋಲ್ ಬಂಕ್‌ಗಳಲ್ಲಿ ಅಳವಡಿಸಿರುವ ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವ ಕ್ಯಾಮರಾಗಳ ಮೂಲಕ ನಿಯಮ ಉಲ್ಲಂಘನೆ ಪತ್ತೆ ಹಚ್ಚಲಾಗುತ್ತದೆ. GRAP ಹಂತ-4 ಜಾರಿಯಲ್ಲಿರುವವರೆಗೆ ಈ ನಿರ್ಬಂಧ ಮುಂದುವರಿಯಲಿದೆ ಎಂದು ದೆಹಲಿ ಸರ್ಕಾರ ಸ್ಪಷ್ಟಪಡಿಸಿದೆ.

