ಹೊಸ ದಿಗಂತ ವರದಿ, ಶಿವಮೊಗ್ಗ:
ಸುಮಾರು 10,240 ಕೋಟಿ ರೂ. ವೆಚ್ಚದ 2500 ಮೆ.ವ್ಯಾ. ವಿದ್ಯುತ್ ಉತ್ಪಾದನೆ ಮಾಡುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.
ಸಾಗರ ತಾಲೂಕಿನ ಕಾರ್ಗಲ್‌ನಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಧ್ಯಕ್ಷತೆಯಲ್ಲಿ ಶರಾವತಿ ಭೂಗರ್ಭ ವಿದ್ಯುತ್ ಯೋಜನೆಗೆ ಸಂಬಂಧಿಸಿದಂತೆ ಪರ ವಿರೋಧದ ಅಹವಾಲು ಆಲಿಸಲು ಮಂಗಳವಾರ ಸಭೆ ಕರೆಯಲಾಗಿತ್ತು.
ಸಭೆಯಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ಕೆಪಿಸಿ ಅಧಿಕಾರಿಗಳೇ ಮಾಹಿತಿ ಕೊಟ್ಟಂತೆ 2500 ಮೆ.ವ್ಯಾ. ವಿದ್ಯುತ್ ನೀರು ಮೇಲೆತ್ತಲು ಉಪಯೋಗಿಸುತ್ತಾರೆ. ಆದರೆ ಉತ್ಪಾದನೆಯಾಗುವ ವಿದ್ಯುತ್ 2000 ಮೆ.ವ್ಯಾ. ಉಳಿದ 500 ಮೆ.ವ್ಯಾ. ವಿದ್ಯುತ್ ಎಲ್ಲಿಂದ ತರುತ್ತೀರಿ? ಈ ಅವೈಜ್ಞಾನಿಕ ಯೋಜನೆ ಕೈಬಿಡಿ ಎಂದು ಒತ್ತಾಯಿಸಿದರು.
ವೃಕ್ಷಲಕ್ಷ ಆಂದೋಲನದ ಅನಂತ ಹೆಗಡೆ ಅಶೀಸರ ಮಾತನಾಡಿ, ಶರಾವತಿ ಪಂಪ್ಡ್ ಸ್ಟೋರೇಜ್ ಬೇಡ ಎಂದು ಜನಪ್ರತಿನಿಧಿಗಳು ಹಕ್ಕೊತ್ತಾಯ ಮಂಡಿಸಬೇಕು. ಈ ಯೋಜನೆ ಸಾಧುವಲ್ಲ ಎನ್ನುವ ಅಭಿಪ್ರಾಯ ಸಂಬಂಧಪಟ್ಟ ಇಲಾಖೆಯಿಂದ ಬಂದಿದೆ ಎಂದರು.
ಪರಿಸರವಾದಿ ಅಖಿಲೇಶ್ ಚಿಪ್ಪಳಿ ಮಾತನಾಡಿ, ಡಿಪಿಆರ್ ಈತನಕ ಸಾರ್ವಜನಿಕರಿಗೆ ನೀಡಿಲ್ಲ. ಡಿಪಿಆರ್ ಕೊಡದೆ ಇದ್ದರೆ ಈ ಸಭೆ ಸಿಂಧು ಆಗುವುದಿಲ್ಲ ಎಂದರು.
ಪರಿಸರಪ್ರೇಮಿಗಳಾದ ಪ್ರೊ.ಬಿ.ಎಂ. ಕುಮಾರಸ್ವಾಮಿ, ಶಿವಾನಂದ ಕಳವೆ, ಡಾ.ಎಲ್.ಕೆ. ಶ್ರೀಪತಿ, ಬಿಜೆಪಿ ಪ್ರಮುಖರಾದ ಡಾ. ರಾಜನಂದಿನಿ ಕಾಗೋಡು, ಟಿ.ಡಿ. ಮೇಘರಾಜ್ ಇನ್ನಿತರರು ಯೋಜನೆಯನ್ನು ತೀವ್ರವಾಗಿ ವಿರೋಧಿಸಿದರು. ವೇದಿಕೆಯಲ್ಲಿ ಕೆಪಿಸಿ ಅಧಿಕಾರಿ ವಿಜಯಕುಮಾರ್, ಮಾಲಿನ್ಯ ನಿಯಂತ್ರಣ ಮಂಡಳಿಯ ರಮೇಶ್ ನಾಯ್ಕ್, ಶಿಲ್ಪಾ, ಡಿಎಫ್‌ಓ ಪ್ರಸನ್ನ ಪಟಗಾರ್ ಇನ್ನಿತರರು ಹಾಜರಿದ್ದರು.