ಹೊಸದಿಗಂತ ಡಿಜಿಟಲ್ ಡೆಸ್ಕ್:
2026ರ ಕ್ರೀಡಾ ಹಂಗಾಮು ಕ್ರಿಕೆಟ್ ಪ್ರಿಯರಿಗೆ ರಸದೌತಣ ನೀಡಲು ಸಜ್ಜಾಗಿದೆ. ಫೆಬ್ರವರಿ 7 ರಿಂದ ಭಾರತ ಮತ್ತು ಶ್ರೀಲಂಕಾ ಆತಿಥ್ಯದಲ್ಲಿ ಪುರುಷರ ಟಿ20 ವಿಶ್ವಕಪ್ ಆರಂಭವಾಗಲಿದ್ದು, ಇದರ ಬೆನ್ನಲ್ಲೇ ಮಹಿಳಾ ಕ್ರಿಕೆಟ್ ತಂಡದ ವಿಶ್ವಕಪ್ ಸಮರಕ್ಕೂ ವೇದಿಕೆ ಸಿದ್ಧವಾಗುತ್ತಿದೆ. ಜೂನ್‌ನಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಮಹಿಳಾ ಟಿ20 ವಿಶ್ವಕಪ್‌ಗೆ ಮುನ್ನ ಸಿದ್ಧತೆಗಾಗಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಟೀಮ್ ಇಂಡಿಯಾ ಏಪ್ರಿಲ್‌ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ವೇಳಾಪಟ್ಟಿಯನ್ನು ಬಿಸಿಸಿಐ ಅಧಿಕೃತವಾಗಿ ಪ್ರಕಟಿಸಿದೆ. ಈ ಪ್ರವಾಸವು ಏಪ್ರಿಲ್ 17 ರಿಂದ ಪ್ರಾರಂಭವಾಗಲಿದ್ದು, ದಕ್ಷಿಣ ಆಫ್ರಿಕಾದ ಮೂರು ಪ್ರಮುಖ ಕ್ರೀಡಾಂಗಣಗಳಲ್ಲಿ ಪಂದ್ಯಗಳು ಜರುಗಲಿವೆ.
2025ರ ಡಿಸೆಂಬರ್‌ನಲ್ಲಿ ಶ್ರೀಲಂಕಾ ವಿರುದ್ಧ ಆಡಿದ್ದ ಭಾರತ ತಂಡ, ಸದ್ಯ ಮಹಿಳಾ ಪ್ರೀಮಿಯರ್ ಲೀಗ್ ಮುಗಿದ ಬಳಿಕ ಫೆಬ್ರವರಿ-ಮಾರ್ಚ್‌ನಲ್ಲಿ ಆಸ್ಟ್ರೇಲಿಯಾ ಪ್ರವಾಸ ಮಾಡಲಿದೆ. ಆಸಿಸ್ ವಿರುದ್ಧದ ಪೂರ್ಣ ಪ್ರಮಾಣದ ಸರಣಿಯ ನಂತರ ದಕ್ಷಿಣ ಆಫ್ರಿಕಾ ಸವಾಲು ಎದುರಾಗಲಿದೆ. ದಕ್ಷಿಣ ಆಫ್ರಿಕಾ ಪ್ರವಾಸ ಮುಗಿದ ತಕ್ಷಣ, ಮೇ ಅಂತ್ಯಕ್ಕೆ ಇಂಗ್ಲೆಂಡ್‌ಗೆ ಪ್ರಯಾಣಿಸಲಿರುವ ಭಾರತ ತಂಡ, ವಿಶ್ವಕಪ್‌ಗೆ ಮೊದಲು ಆತಿಥೇಯ ಇಂಗ್ಲೆಂಡ್ ವಿರುದ್ಧ 3 ಪಂದ್ಯಗಳ ಸರಣಿಯನ್ನು ಆಡಿ, ಜೂನ್ 12 ರಂದು ವಿಶ್ವಕಪ್ ಅಭಿಯಾನ ಆರಂಭಿಸಲಿದೆ.
ದಕ್ಷಿಣ ಆಫ್ರಿಕಾ ಪ್ರವಾಸದ ವೇಳಾಪಟ್ಟಿ ಹೀಗಿದೆ:
ಐದು ಪಂದ್ಯಗಳ ಈ ಸರಣಿಯು ದಕ್ಷಿಣ ಆಫ್ರಿಕಾದ ಡರ್ಬನ್, ಜೋಹಾನ್ಸ್‌ಬರ್ಗ್ ಮತ್ತು ಬೆನೋನಿಯಲ್ಲಿ ನಡೆಯಲಿದೆ.
| ಪಂದ್ಯ | ದಿನಾಂಕ | ಸ್ಥಳ |
| 1ನೇ ಟಿ20 | ಏಪ್ರಿಲ್ 17 | ಡರ್ಬನ್ |
| 2ನೇ ಟಿ20 | ಏಪ್ರಿಲ್ 19 | ಡರ್ಬನ್ |
| 3ನೇ ಟಿ20 | ಏಪ್ರಿಲ್ 22 | ಜೋಹಾನ್ಸ್‌ಬರ್ಗ್ |
| 4ನೇ ಟಿ20 | ಏಪ್ರಿಲ್ 25 | ಜೋಹಾನ್ಸ್‌ಬರ್ಗ್ |
| 5ನೇ ಟಿ20 | ಏಪ್ರಿಲ್ 27 | ಬೆನೋನಿ |


