ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಲೇಜು ವಾಲಿಬಾಲ್ ತರಬೇತುದಾರನ ಕಿರುಕುಳವನ್ನು ಸಹಿಸಲಾಗದೆ 19 ವರ್ಷದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಹೈದರಾಬಾದ್‌ನ ತರ್ನಾಕ ಪ್ರದೇಶದಲ್ಲಿ ನಡೆದಿದೆ. ರೈಲ್ವೆ ಪದವಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾಗಿದ್ದ ಯುವತಿ, ತರಬೇತುದಾರ ಅಂಬಾಜಿ ನಾಯಕ್ ನೀಡುತ್ತಿದ್ದ ಮಾನಸಿಕ ಕಿರುಕುಳದಿಂದ ಆತ್ಮಹತ್ಯೆ ಮಾಡಿದ್ದಾಳೆ ಎಂದು ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.
ಮೃತಳ ತಂದೆ ನೀಡಿದ ದೂರಿನ ಪ್ರಕಾರ, ತರಬೇತುದಾರ ಅಂಬಾಜಿ ನಾಯಕ್ ತನ್ನ ಪುತ್ರಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದ. ತನ್ನೊಂದಿಗೆ ಸಂಬಂಧ ಬೆಳೆಸಲು ಒತ್ತಡ ಹೇರುತ್ತಿದ್ದ ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯುವತಿ ತೀವ್ರ ನಿರಾಶೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.
ಘಟನೆ ಬಳಿಕ ಸ್ಥಳೀಯ ಪೊಲೀಸರು ತಕ್ಷಣ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಯಾವುದೇ ಡೆತ್‌ನೋಟ್ ಅಥವಾ ವೀಡಿಯೊ ದಾಖಲೆ ಪತ್ತೆಯಾಗಿಲ್ಲ ಎಂದು ಲಾಲಾಗುಡ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ. ಸಂತ್ರಸ್ತೆ ತನ್ನ ಕುಟುಂಬಕ್ಕೆ ಕಿರುಕುಳದ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲವಾದರೂ, ಆಕೆಯ ಸ್ನೇಹಿತರು ತರಬೇತುದಾರನ ವರ್ತನೆ ಬಗ್ಗೆ ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆಗಾಗಿ ಈಗಾಗಲೇ ಎರಡು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದ್ದು, ಆರೋಪಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಪೊಲೀಸರು ನೀಡಿದ್ದಾರೆ.