ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿವಮೊಗ್ಗದಲ್ಲಿ ಭಿನ್ನಕೋಮಿನ ಹುಡುಗರಿಂದ ವಿದ್ಯಾರ್ಥಿ ಕೊಲೆಯಾಗಿರುವ ಸುದ್ದಿ ಕೇಳಿ ದಿಗ್ಭ್ರಮೆಯಾಯಿತು, ನಿಷ್ಪಕ್ಷವಾಗಿ ತನಿಖೆ ನಡೆಸುವಂತೆ ಸೂಚಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಟ್ವಿಟರ್‌ನಲ್ಲಿ ಸಿಎಂ ಪೋಸ್ಟ್ ಮಾಡಿದ್ದು, ಚೆನ್ನಾಗಿ ಓದಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕಿದ್ದ ಮಕ್ಕಳು ಕಣ್ಣಮುಂದೆಯೇ ಜೀವ ಬಿಟ್ಟರೆ ಪೋಷಕರ ಸ್ಥಿತಿ ಏನಾಗೋದಿಲ್ಲ? ಕುಟುಂಬಕ್ಕೆ ಆಸರೆಯಾಗಬೇಕಿದ್ದ ಮಕ್ಕಳು ದುಶ್ಚಟಗಳಿಗೆ ಬಲಿಯಾಗಿ, ಹೀಗೆ ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗುವುದು ದುರದೃಷ್ಟಕರ.
ಕೊಲೆಯ ಉದ್ದೇಶ ಏನಾದ್ರೂ ಇರಲಿ, ಕೊಲೆ ಮಾಡಿದವರು ಯಾರಾದ್ರೂ ಇರಲಿ ಕಾನೂನಿನ ಅಡಿಯಲ್ಲಿ ಏನಾಗಬೇಕೋ ಅದು ಆಗೇ ಆಗುತ್ತದೆ. ಭವಿಷ್ಯದಲ್ಲಿ ಇಂಥ ಕೆಲಸ ಮಾಡೋಕೆ ನೂರು ಬಾರಿ ಯೋಚಿಸಬೇಕು. ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಿ ಅಂತ ಪೊಲೀಸ್ ಇಲಾಖೆಗೆ ಹೇಳಿದ್ದೀನಿ.
ಶಾಲೆಯ ಸುತ್ತಮುತ್ತ ಕಾನೂನು ಬಾಹಿರ ಕೃತ್ಯಗಳು ನಡೆಯದಂತೆ ಆಡಳಿತ ಮಂಡಳಿ ನಿಗಾ ವಹಿಸಬೇಕು. ಅಗತ್ಯಬಿದ್ದರೆ ಪೊಲೀಸರ ನೆರವನ್ನು ಪಡೆಯಬೇಕು. ಮಗನನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ಕುಟುಂಬವನ್ನು ಸಂತೈಸುವ ಉದ್ದೇಶದಿಂದ ಮೃತನ ಪೋಷಕರಿಗೆ ಸರ್ಕಾರದ ವತಿಯಿಂದ 15 ಲಕ್ಷ ಪರಿಹಾರವನ್ನು ನೀಡಲಾಗುವುದು. ಈ ದುಷ್ಕೃತ್ಯ ಎಸಗಿದ ಎಲ್ಲರನ್ನೂ ಈಗಾಗಲೇ ಬಂಧಿಸಲಾಗಿದ್ದು, ನಿಷ್ಪಕ್ಷಪಾತ ತನಿಖೆ ನಡೆಸಿ ಗರಿಷ್ಠ ಶಿಕ್ಷೆಯಾಗುವಂತೆ ನೋಡಿಕೊಳ್ಳುವ ವಾಗ್ದಾನವನ್ನು ಕೂಡ ಆ ನೊಂದ ಕುಟುಂಬಕ್ಕೆ ಈ ವೇಳೆ ನೀಡುತ್ತಿದ್ದೇನೆ ಎಂದಿದ್ದಾರೆ.



