ಹೊಸ ದಿಗಂತ ವರದಿ,ಶಿರಸಿ:
ಶೈಕ್ಷಣಿಕ ಪ್ರವಾಸಕ್ಕೆ ಬಂದಿದ್ದ ಕಾಲೇಜು ವಿದ್ಯಾರ್ಥಿಗಳ ಬಸ್ಸೊಂದು ಪ್ರವಾಸಿತಾಣ ಯಾಣಕ್ಕೆ ಸಮೀಪದ ಹಸೆಮನೆ ನುಜಗಿ ಕ್ರಾಸ್ ಬಳಿ ಪಲ್ಟಿಯಾಗಿ 20 ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡ ಘಟನೆ ನಡೆದಿದೆ.
ದಾವಣಗೆರೆಯ ಜೈನ್ ಪಿ.ಯು ಕಾಲೇಜಿನ ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿಗಳು ಸೇರಿದಂತೆ ಸುಮಾರು 52 ಜನರ ತಂಡ ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಶೈಕ್ಷಣಿಕ ಪ್ರವಾಸಕ್ಕೆಂದು ಆಗಮಿಸಿದ್ದು ದಾಂಡೇಲಿ ಪ್ರವಾಸ ಮುಗಿಸಿ ಶಿರಸಿಗೆ ಬಂದು ಮಾರಿಕಾಂಬಾ ದೇವಾಲಯಕ್ಕೆ ಭೇಟಿ ನೀಡಿ ಯಾಣ, ವಿಭೂತಿ ಪಾಲ್ಸ್ ಕಡೆ ಹೊರಟಿದ್ದ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕೆ.ಎ19ಎಇ6819 ನೋಂದಣಿ ಸಂಖ್ಯೆಯ ಖಾಸಗಿ ಬಸ್ ರಸ್ತೆಯ ಬದಿಯಲ್ಲಿ ಪಲ್ಟಿಯಾಗಿದ್ದು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸೇರಿದಂತೆ 20 ಕ್ಕೂ ಹೆಚ್ಚು ಜನರು ಗಾಯಗೊಂಡಿರುವುದಾಗಿ ತಿಳಿದು ಬಂದಿದೆ.
ಗಾಯಾಳುಗಳನ್ನು ಶಿರಸಿ, ಅಂಕೋಲಾ ಆಸ್ಪತ್ರೆಗಳಿಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು ತೀವ್ರ ಸ್ವರೂಪದ ಗಾಯಗೊಂಡವರನ್ನು ಕಾರವಾರ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ.
ಶಿರಸಿ ಗ್ರಾಮೀಣ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿದ್ದಾರೆ

