ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಹಾಡಹಗಲೇ ಕತ್ತು ಕೂಯ್ದು ಕಾಲೇಜು ವಿದ್ಯಾರ್ಥಿನಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಲ್ಲೇಶ್ವರಂ ಮಂತ್ರಿ ಮಾಲ್ ಹಿಂಭಾಗದ ಶ್ರೀರಾಮಪುರ ರೈಲ್ವೆ ಟ್ರ್ಯಾಕ್ ಬಳಿ ನಡೆದಿದೆ . ಮೃತ ವಿದ್ಯಾರ್ಥಿನಿಯನ್ನು ಯಾಮಿನಿ ಪ್ರಿಯಾ (22) ಎಂದು ಗುರುತಿಸಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ವಿಘ್ನೇಶ್ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ವಿಘ್ನೇಶ್ ತಲೆ ಮರೆಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ಇನ್ನು ಕೊಲೆಯ ಹಿಂದಿನ ಕಾರಣ ಬಹಿರಂಗವಾಗಿದ್ದು, ವಿಘ್ನೇಶ್ ಹಲವು ಸಮಯಗಳಿಂದ ಪ್ರೀತಿಸುವಂತೆ ಯಾಮಿನಿ ಪ್ರಿಯಾ ಹಿಂದೆಯೇ ಓಡಾಡುತ್ತಿದ್ದ. ಆದರೆ ಪ್ರಿಯಾ ಒಪ್ಪದಿರುವುದೇ ಕೊಲೆಗೆ ಕಾರಣ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ.
ಬಿ ಫಾರ್ಮ್ ವ್ಯಾಸಂಗ ಮಾಡುತ್ತಿದ್ದ ಪ್ರಿಯಾ ಪರೀಕ್ಷೆ ಮುಗಿಸಿ ಮಧ್ಯಾಹ್ನ ಕಾಲೇಜಿನಿಂದ ಮನೆಗೆ ಮರಳುತ್ತಿದ್ದ ವೇಳೆ ಘಟನೆ ನಡೆದಿದೆ. ಪ್ರಿಯಾ ಏಕಾಂಗಿಯಾಗಿ ಮನೆಗೆ ತೆರಳುತ್ತಿರುವುದನ್ನು ಗಮನಿಸಿದ ವಿಘ್ನೇಶ್ ಹಿಂದಿನಿಂದ ಬೈಕ್‌ನಲ್ಲಿ ಬಂದು ಕತ್ತು ಕೊಯ್ದು ಪರಾರಿಯಾಗಿದ್ದಾನೆ ಎಂದು ತನಿಖೆ ಕೈಗೆತ್ತಿಕೊಂಡಿರುವ ಸ್ಥಳಕ್ಕೆ ಶ್ರೀರಾಮಪುರ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಯಾಮಿನಿ ಪ್ರಿಯಾ ತಂದೆ ಗೋಪಾಲ್ ಈ ಬಗ್ಗೆ ಮಾತನಾಡಿ, ‘ವಿಘ್ನೇಶ್ ಹಲವು ತಿಂಗಳಿನಿಂದ ನನ್ನ ಮಗಳಿಗೆ ಹಿಂಸೆ ಕೊಡುತ್ತಿದ್ದ. ಹಿಂಬಾಲಿಸಿಕೊಂಡು ಬಂದು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ಈ ಬಗ್ಗೆ ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟಿದ್ದೆವು. ಈ ಸಂಬಂಧ 6 ತಿಂಗಳ ಹಿಂದೆ ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಿಕೊಂಡಿದ್ದರು. ಈಗ ಕಾಟ ಕೊಡುತ್ತಿದ್ದಾನಾ ಎಂದು ಕೆಲವು ದಿನಗಳ ಹಿಂದೆ ಕೇಳಿದ್ದೆ. ಇಲ್ಲ ಎಂದಿದ್ದಳು. ಆದರೆ ಈಗ ಕೊಲೆ ಮಾಡಿದ್ದಾನೆ’ಎಂದು ನೋವು ತೋಡಿಕೊಂಡಿದ್ದಾರೆ.

