ಹೊಸದಿಗಂತ ವರದಿ ಮಂಗಳೂರು:
ಜನನದ ಸಮಯದಿಂದಲೇ ಅಪರೂಪದ ದವಡೆ ಸಮಸ್ಯೆಯಿಂದ ಬಳಲುತ್ತಿದ್ದ 5 ವರ್ಷದ ಬಾಲಕನಿಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆಯ ಮೂಲಕ ಬಾಲಕನಿಗೆ ಹೊಸ ಜೀವನ ನೀಡಿದ್ದಾರೆ.
ಟಿಎಮ್‌ಜೆ್ ( ಟೆಂಪೊರೊಮೆಂಡಿಬ್ಯುಲರ್) ಆನ್‌ಕಿಲೊಸಿಸ್ ಸಮಸ್ಯೆಯಿಂದ ಬಾಲಕ ಆರವ್ (ಹೆಸರು ಬದಲಾಯಿಸಲಾಗಿದೆ) ಬಳಲುತ್ತಿದ್ದು ಸರಿಯಾಗಿ ಬಾಯಿ ತೆರೆಯಲು ಸಾಧ್ಯವಾಗದೇ ಸಂಕಷ್ಟ ಅನುಭವಿಸುತ್ತಿದ್ದ. ಆಸ್ಪತ್ರೆಯ ಓರಲ್ ಮತ್ತು ಮ್ಯಾಕ್ಸಿಲ್ಲೊಫೇಶಿಯಲ್ ವಿಭಾಗದ ಕನ್ಸಲ್ಟೆಂಟ್ ಡಾ. ಅಭಯ್ ತಾರಾನಾಥ್ ಕಾಮತ್ ಮತ್ತವರ ತಂಡ ಬಾಲಕನ ಜೀವನ ಸುಧಾರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಏನಿದು ಅಪರೂಪದ ದವಡೆ ಸಮಸ್ಯೆ?
ಟಿಎಮ್‌ಜೆ ಆಂಕಿಲೊಸಿಸ್ ಎಂಬ ಸಮಸ್ಯೆಯಿಂದ ನಾಲ್ಕು ವರ್ಷಗಳಿಂದ ಬಾಲಕನಿಗೆ ಬಾಯಿ ತೆರೆಯಲೂ ಸಾಧ್ಯವಾಗದೇ ಸಮಸ್ಯೆ ಉಂಟಾಗಿತ್ತು. ಇದರಿಂದ ಯಾವುದೇ ಗಟ್ಟಿ ಆಹಾರ ಸೇವನೆ ಸಾಧ್ಯವಾಗುತ್ತಿರಲಿಲ್ಲ. ಮಾತನಾಡುವುದು, ತನಗೆ ಅನ್ನಿಸಿದ್ದನ್ನು ವ್ಯಕ್ತಪಡಿಸುವುದು ಬಾಲಕನಿಗೆ ಕಷ್ಟವಾಗಿತ್ತು. ಜೊತೆಗೆ ಈ ಸಮಸ್ಯೆ ಯಿಂದ ಬಾಲಕನ ಕೆಳ ದವಡೆಯ ಬೆಳವಣಿಗೆ ಕುಂಠಿತಗೊಂಡಿದ್ದು ತೀವ್ರ ಮಟ್ಟದಲ್ಲಿ ಮುಖ ವಿರೂಪಗೊಂಡಿತ್ತು. ನಿದ್ದೆ ಸಮಸ್ಯೆ, ಗೊರಕೆ ಯಂತಹ ಸಮಸ್ಯೆ ಕೂಡ ಎದುರಾಗಿದ್ದು ಸಾಕಷ್ಟು ಸಾಮಾಜಿಕ ಕಳಂಕ, ಭಾವನಾತ್ಮಕ ಹೊರೆಯನ್ನೂ ಅನುಭವಿಸುವಂತಾಗಿತ್ತು.
ಬಾಲಕನ ಸಮಸ್ಯೆಯ ಸಂಕೀರ್ಣತೆಯನ್ನು ಅರಿತ ಆಸ್ಪತ್ರೆಯ ಬಹು ವಿಭಾಗೀಯ ತಜ್ಞರ ತಂಡ ವಿವಿಧ ಹಂತದಲ್ಲಿ ಚಿಕಿತ್ಸೆಯನ್ನು ಆರಂಭಿಸಿತ್ತು. ಓರಲ್ ಮತ್ತು ಮ್ಯಾಕ್ಸಿಲ್ಲೋಫೇಶಿಯಲ್ ಸರ್ಜರಿ ವಿಭಾಗದ ಡಾ ಅಭಯ್ ಟಿ ಕಾಮತ್ ಮತ್ತು ಡಾ. ವಾಸುದೇವ್ ದಾಸ್, ಮಕ್ಕಳ ತಜ್ಞರಾದ ಡಾ ಸೌಂದರ್ಯ, ಕಾರ್ಡಿಯೊ ಥೊರೈಕಿಕ್ ಮತ್ತು ವ್ಯಾಸ್ಕ್ಯೂಲರ್ ಸರ್ಜನ್ ಡಾ ಮಾಧವ್ ಕಾಮತ್, ಅರವಳಿಕೆ ತಜ್ಞರಾದ ಡಾ ಫ್ರಿಡಾ ಮತ್ತು ಮಣಿಪಾಲ್ ದಂತ ವೈದ್ಯಕೀಯ ವಿಭಾಗದ ಫ್ರೊಫೆಸರ್ ಮತ್ತು ಮುಖ್ಯಸ್ಥರಾದ ಡಾ. ಆದರ್ಶ ಕೆ ಕೂಡ ತಂಡದಲ್ಲಿ ಉಪಸ್ಥಿತರಿದ್ದರು. ಈ ಮೂಲಕ ಬಾಲಕನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮತ್ತು ಚೇತರಿಕೆಯನ್ನು ಸಾಧಿಸಲಾಯಿತು.
ಹೇಗಿತ್ತು ಚಿಕಿತ್ಸೆ?
ಮೊದಲ ಹಂತದ ಚಿಕಿತ್ಸೆಯಲ್ಲಿ ಮಾನ್‌ಡಿಬಲ್ (ದವಡೆಯನ್ನು ರಚಿಸುವ ಯು ಆಕಾರದ ಮೂಳೆ)ಬೆಳವಣಿಗೆಗೆ ಶಸ್ತ್ರಚಿಕಿತ್ಸೆ ಮೂಲಕ ಎಕ್ಸಟರ್ನಲ್ ಡಿಸ್ಟ್ರಾಕ್ಟರ್ ಡಿವೈಸ್ (ಸಾಧನ) ಅಳವಡಿಸಿ ಆಸ್ಪತ್ರೆಯ ತೀವ್ರ ನಿಗಾದಲ್ಲಿ ದಿನಕ್ಕೆ ಎರಡು ಬಾರಿ ಈ ಸಾಧನವನ್ನು ಸಕ್ರೀಯಗೊಳಿಸಿ ಕ್ರಮೇಣ ಕೆಳ ದವಡೆಯ ಭಾಗ ಮುಂದೆ ಬರುವಂತೆ ಮಾಡಲಾಯಿತು. ಇದು ದವಡೆಯ ಬಲವರ್ಧನೆಗೂ ಸಹಕಾರಿಯಾಯಿತು.
10 ತಿಂಗಳ ಬಳಿಕ ಎರಡನೇ ಹಂತದಲ್ಲಿ ಹೊಸ ಮೂಳೆಯ ಬೆಳವಣಿಗೆಯನ್ನು ರಕ್ಷಿಸಲು ಆಂಕಿಲೋಸ್ಡ್ ಮಾಸ್‌ನ್ನು ಹೊರತೆಗೆಯಲಾಯಿತು, ಜೊತೆಗೆ ಮೂಳೆ ಕಸಿಯನ್ನು ಯಶಸ್ವಿಯಾಗಿ ನಿರ್ವಹಿಸಲಾಯಿತು. ಈ ಮೂಲಕ ಬಾಲಕನಿಗೆ ಬಾಯಿ ತೆರೆಯಲು ಸಾಧ್ಯವಾಗುವಂತೆ ಮಾಡಲಾಯಿತು. ಚಿಕಿತ್ಸೆಯಲ್ಲಿ ಇದೊಂದು ಮಹತ್ವದ ಘಟ್ಟವಾಗಿ ಪರಿಣಮಿಸಿದೆ. ಸದ್ಯ ಬಾಲಕ ಸುಲಭವಾಗಿ ಆಹಾರವನ್ನು ಅಗೆಯಬಹುದು ಹಾಗೇ ಸಮಾಜವನ್ನು ನಗುಮುಖದಲ್ಲಿ ಎದುರಿಸಲು ಸಾಧ್ಯವಾಗಿದೆ.
ಡಾ ಅಭಯ್ ತಾರಾನಾಥ್ ಕಾಮತ್ ಮಾತನಾಡಿ “ ಈ ಶಸ್ತ್ರಚಿಕಿತ್ಸೆಯು ದವಡೆಯ ಕಾರ್ಯವನ್ನು ಮರು ಆರಂಭಿಸಿದ ಕಾರ್ಯ ಮಾತ್ರವಲ್ಲ , ಇದು ಒಂದು ಮಗುವಿಗೆ ಆತನ ಬಾಲ್ಯವನ್ನು ಮರು ನೀಡಿದ ಯಶಸ್ಸು, ಆರವ್ ನ ಚೇತರಿಕೆಯು ಸಹಯೋಗದ ಕಾಳಜಿ, ನಿಖರವಾದ ಯೋಜನೆ, ಹಾಗೇ ಶಸ್ತ್ರಚಿಕಿತ್ಸೆಯನ್ನು ಎದುರಿಸುವ ಬಾಲಕನ ಆತ್ಮಸ್ಥೈರ್ಯ ಏನನ್ನು ಸಾಧಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ. ಬಾಲಕ ಮೊದಲ ಬಾರಿಗೆ ಮುಕ್ತವಾಗಿ ನಗುವುದನ್ನು ನೋಡುವುದು ನಮ್ಮ ಇಡೀ ತಂಡಕ್ಕೆ ಅತ್ಯಂತ ತೃಪ್ತಿಕರ ಕ್ಷಣಗಳಲ್ಲಿ ಒಂದಾಗಿದೆ. ” ಎಂದರು.
ಚಿಕಿತ್ಸೆ ಕುರಿತು ಮಾತನಾಡಿದ ಮಕ್ಕಳ ತಜ್ಞೆ ಡಾ ಸೌಂದರ್ಯ “ ಸಕಾಲಿಕ ಮತ್ತು ಸಂಘಟಿತ ಆರೈಕೆಯು ಆರವ್‌ನ ಬದುಕಲ್ಲಿ ಬದಲಾವಣೆ ತಂದಿದೆ. ಬಾಲಕ ಸಂತೋಷದಿಂದ ಆಹಾರ ಸೇವಿಸುವುದು, ಸಂವಹನ ನಡೆಸುವುದು , ಬಾಲ್ಯವನ್ನು ಖುಷಿಯಿಂದ ಅನುಭವಿಸುವುದನ್ನು ನೋಡುವುದು ಸಂತೋಷಕರ. “ಎಂದರು.


