ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ತಿರುವಲ್ಲೂರು ಜಿಲ್ಲೆಯಲ್ಲಿ ನಡೆದಿದ್ದ ಹಾವು ಕಡಿತ ಪ್ರಕರಣ, ಇದೀಗ ಭೀಕರ ಹತ್ಯೆಯಾಗಿ ಬೆಳಕಿಗೆ ಬಂದಿದೆ. ಹೌದು! ಸಹಜ ಸಾವೆಂದು ಮೊದಲಿಗೆ ನಂಬಲಾಗಿದ್ದ ಈ ಘಟನೆ, ವಿಶೇಷ ತನಿಖಾ ತಂಡದ ತನಿಖೆಯಿಂದ ಸಂಪೂರ್ಣವಾಗಿ ತಿರುವು ಪಡೆದಿದ್ದು, ಮೃತನ ಸ್ವಂತ ಮಕ್ಕಳೇ ವಿಮಾ ಹಣಕ್ಕಾಗಿ ತಂದೆಯನ್ನು ಹಾವು ಕಚ್ಚಿಸಿ ಕೊಂದಿರುವುದು ದೃಢಪಟ್ಟಿದೆ.
ಪೋಥತುರ್ಪೇಟೆ ಗ್ರಾಮದ ಸರ್ಕಾರಿ ಶಾಲೆಯ ಪ್ರಯೋಗಾಲಯ ಸಹಾಯಕ ಇ.ಪಿ. ಗಣೇಸನ್ (56) ತಮ್ಮ ಮನೆಯಲ್ಲಿ ಮೃತಪಟ್ಟಿದ್ದರು. ಕುಟುಂಬಸ್ಥರು ಹಾವು ಕಚ್ಚಿದ ಕಾರಣ ಸಾವು ಸಂಭವಿಸಿದೆ ಎಂದು ಹೇಳಿದ್ದರಿಂದ, ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿದ್ದರು.
ಆದರೆ ಗಣೇಸನ್ ಹೆಸರಿನಲ್ಲಿ ಮಾಡಲಾಗಿದ್ದ ಕೋಟ್ಯಂತರ ರೂಪಾಯಿ ವಿಮಾ ಪಾಲಿಸಿಗಳ ಹಿನ್ನೆಲೆ, ವಿಮಾ ಕಂಪನಿಗೆ ಅನುಮಾನ ಹುಟ್ಟಿಸಿತು. ಫಲಾನುಭವಿಗಳ ವರ್ತನೆಯೂ ಶಂಕಾಸ್ಪದವಾಗಿದ್ದರಿಂದ, ವಿಷಯವನ್ನು ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತರಲಾಯಿತು.
ಎಸ್‌ಐಟಿ ತನಿಖೆಯಲ್ಲಿ, ಇಬ್ಬರು ಪುತ್ರರು ಹಣದ ಲಾಭಕ್ಕಾಗಿ ಸಂಚು ರೂಪಿಸಿದ್ದನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಮೊದಲ ಪ್ರಯತ್ನದಲ್ಲಿ ನಾಗರಹಾವಿನಿಂದ ಕಚ್ಚಿಸಿದರೂ ಗಣೇಸನ್ ಬದುಕುಳಿದಿದ್ದರು. ಬಳಿಕ ಮತ್ತೊಮ್ಮೆ ಅತ್ಯಂತ ವಿಷಕಾರಿ ಕ್ರೈಟ್ ಹಾವನ್ನು ಬಳಸಿ ಬೆಳಗಿನ ಜಾವ ಕುತ್ತಿಗೆಗೆ ಕಚ್ಚಿಸಿ ಹತ್ಯೆ ಮಾಡಲಾಗಿದೆ. ಹಾವು ಕಚ್ಚಿದ ಬಳಿಕ ಆಸ್ಪತ್ರೆಗೆ ಕರೆದೊಯ್ಯುವಂತೆ ನಟಿಸಿ ಸಮಯ ವಿಳಂಬ ಮಾಡಿದ್ದರೂ ತನಿಖೆಯಲ್ಲಿ ಎಲ್ಲ ಸತ್ಯ ಬಯಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪುತ್ರರು ಸೇರಿದಂತೆ ಆರು ಮಂದಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

