ಹೊಸದಿಗಂತ ವರದಿ ಮಡಿಕೇರಿ:
ಆಸ್ತಿ ವಿಚಾರಕ್ಕೆ ಸಂಬಂಧಿಸಿ ನಡೆದ ಕಲಹದ ಸಂದರ್ಭ ಅಣ್ಣನ ಮಗನ ಮೇಲೆ ಗುಂಡು ಹಾರಿಸಿದ ಘಟನೆ ವೀರಾಜಪೇಟೆ ತಾಲೂಕಿನ ಅಮ್ಮತ್ತಿ ಬಳಿ ಬುಧವಾರ ಬೆಳಗ್ಗೆ ನಡೆದಿದೆ.
ಅಮ್ಮತ್ತಿ ಸಮೀಪದ ಕಾವಾಡಿ ಗ್ರಾಮದ ಮಾಚಿಮಂಡ ರತನ್ ಎಂಬವರ ಪುತ್ರ ಬ್ರಿಜೇಶ್ ಎಂಬವರೇ ಗುಂಡೇಟಿಗೆ ಗಾಯಗೊಂಡವರಾಗಿದ್ದಾರೆ.
ಬ್ರಿಜೇಶ್ ಅವರ ಚಿಕ್ಕಪ್ಪ ಮಾಚಿಮಂಡ ಅಪ್ಪಚ್ಚು ಅವರು ಗುಂಡು ಹಾರಿಸಿದವರಾಗಿದ್ದು, ಇವರ ಪುತ್ರ ಅಮೃತ್ ಎಂಬವರು ಬ್ರಿಜೇಶ್ ತಂದೆಯ ಮೇಲೆ ಹಲ್ಲೆ ನಡೆಸಿರುವುದಾಗಿ ಹೇಳಲಾಗಿದೆ.
ಬುಧವಾರ ಬೆಳಗ್ಗೆ ಏಳು ಗಂಟೆ ಸುಮಾರಿಗೆ ರತನ್ ಹಾಗೂ ಅವರ ಪುತ್ರ ಬ್ರಿಜೇಶ್ ಕಾಫಿ ಕೊಯ್ಯಲೆಂದು ತೋಟಕ್ಕೆ ಬಂದಾಗ, ಆಸ್ತಿ ವಿಷಯಕ್ಕೆ ಮಾತಿಗೆ ಮಾತು ಬೆಳೆದು ಗುಂಡಿನ ದಾಳಿ ನಡೆದಿರುವುದಾಗಿ ತಿಳಿದುಬಂದಿದೆ.
ಗುಂಡಿನ ದಾಳಿಗೊಳಗಾಗಿ ಗಾಯಗೊಂಡಿರುವ ಬ್ರಿಜೇಶ್ ವೀರಾಜಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದು, ಘಟನಾ ಸ್ಥಳಕ್ಕೆ ವೀರಾಜಪೇಟೆ ಗ್ರಾಮಾಂತರ ಪೋಲಿಸರು ಭೇಟಿ ನೀಡಿ ಮುಂದಿನ ಕ್ರಮ ಜರುಗಿಸಿದ್ದಾರೆ.
ಇದ್ದಕ್ಕಿದ್ದಂತೆಯೇ ಕಾಫಿ ತೋಟದಲ್ಲಿ ಕೇಳಿತು ಗುಂಡಿನ ಸದ್ದು! ಆಸ್ತಿ ವಿಷಯಕ್ಕೆ ಕಲಹ

