ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲ್ ಮತ್ತು ಗಾಜಾದ ಹಮಾಸ್ ಬಂಡುಕೋರರ ನಡುವಿನ ಸುದೀರ್ಘ ಎರಡು ವರ್ಷಗಳ ಹೋರಾಟದ ನಂತರ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಸ್ರೇಲ್ ಸಂಸತ್ತನ್ನು ಉದ್ದೇಶಿಸಿ ಐತಿಹಾಸಿಕ ಭಾಷಣ ಮಾಡಿದರು. “ಇದು ಕೇವಲ ಯುದ್ಧದ ಅಂತ್ಯವಲ್ಲ. ಇದು ಹೊಸ ಮಧ್ಯಪ್ರಾಚ್ಯದ ಐತಿಹಾಸಿಕ ಉದಯವಾಗಿದೆ,” ಎಂದು ಟ್ರಂಪ್ ಘೋಷಿಸಿದರು.
ಟ್ರಂಪ್ ಅವರ ಮಾತುಗಳು ಹಲವು ವರ್ಷಗಳ ಸಂಘರ್ಷದ ನಂತರ ಶಾಂತಿಯ ಮಹತ್ವವನ್ನು ಒತ್ತಿಹೇಳಿದವು. “ಹಲವು ವರ್ಷಗಳ ನಿರಂತರ ಯುದ್ಧದ ನಂತರ, ಇಂದು ಆಕಾಶವು ಶಾಂತವಾಗಿದೆ. ಬಂದೂಕುಗಳು ಮೌನವಾಗಿವೆ. ಸೈರನ್‌ಗಳು ಶಬ್ಧ ಮಾಡುವುದನ್ನು ನಿಲ್ಲಿಸಿವೆ. ಶಾಂತಿಯಿಂದ ಇರುವ ಪವಿತ್ರ ಭೂಮಿಯ ಮೇಲೆ ಸೂರ್ಯ ಉದಯಿಸುತ್ತಿದ್ದಾನೆ,” ಎಂದು ಅವರು ಹೇಳಿದರು.
ಒತ್ತೆಯಾಳುಗಳ ಬಿಡುಗಡೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ ಟ್ರಂಪ್, “ಒತ್ತೆಯಾಳುಗಳು ಹಿಂತಿರುಗಿದ್ದಾರೆ, ಅದನ್ನು ಹೇಳಲು ತುಂಬಾ ಸಂತೋಷವಾಗುತ್ತಿದೆ,” ಎಂದರು. ತಮ್ಮ ವ್ಯಕ್ತಿತ್ವದ ಬಗ್ಗೆ ಇದ್ದ ತಪ್ಪು ಕಲ್ಪನೆಗಳನ್ನು ಸ್ಪಷ್ಟಪಡಿಸಿದ ಅವರು, “ನಾನು ಕ್ರೂರಿಯಾಗಿ ವರ್ತಿಸುತ್ತೇನೆ ಎಂದು ಎಲ್ಲರೂ ಭಾವಿಸಿದ್ದರು. ನಾನು ಎಲ್ಲರೊಂದಿಗೆ ಯುದ್ಧಕ್ಕೆ ಹೋಗುತ್ತೇನೆ ಎಂದು ಹಿಲರಿ ಕ್ಲಿಂಟನ್ ಹೇಳಿದ್ದು ನನಗೆ ನೆನಪಿದೆ. ಆದರೆ ನಾನು ಯುದ್ಧ ಬಯಸುವ ವ್ಯಕ್ತಿಯಲ್ಲ. ನನ್ನದು ಯುದ್ಧ ನಿಲ್ಲಿಸುವ ವ್ಯಕ್ತಿತ್ವ,” ಎಂದು ದೃಢವಾಗಿ ಹೇಳಿದರು.
ರಾಜಧಾನಿ ಟೆಲ್ ಅವೀವ್‌ಗೆ ಬಂದಿಳಿದ ಟ್ರಂಪ್‌ಗೆ ಅದ್ಧೂರಿ ಸ್ವಾಗತ ದೊರೆಯಿತು. ಯುದ್ಧ ನಿಲ್ಲಿಸಲು ಮಧ್ಯಸ್ಥಿಕೆ ವಹಿಸಿದ್ದಕ್ಕಾಗಿ ಇಸ್ರೇಲ್ ಸಂಸದರು ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಮತ್ತು ಅಭಿನಂದಿಸುವ ಮೂಲಕ ಕೃತಜ್ಞತೆ ಸಲ್ಲಿಸಿದರು. ಈ ಭೇಟಿಯು ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪಿಸುವ ಟ್ರಂಪ್ ಆಡಳಿತದ ಪ್ರಮುಖ ರಾಜತಾಂತ್ರಿಕ ವಿಜಯವಾಗಿ ಪರಿಗಣಿಸಲಾಗಿದೆ.

