ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುಪ್ರೀಂ ಕೋರ್ಟ್ ಇಂದು ಉಚಿತ ಕೊಡುಗೆಗಳನ್ನು ಘೋಷಿಸಿದ್ದಕ್ಕಾಗಿ ರಾಜ್ಯಗಳನ್ನು ಕಟುವಾಗಿ ಟೀಕಿಸಿದೆ.
ತಮಿಳುನಾಡು ಸರ್ಕಾರವು ರಾಜ್ಯದಾದ್ಯಂತ ಪ್ರತಿಯೊಬ್ಬರಿಗೂ ಉಚಿತ ವಿದ್ಯುತ್ ನೀಡುವಂತೆ ತಮಿಳುನಾಡು ವಿದ್ಯುತ್ ವಿತರಣಾ ನಿಗಮ (TANGEDCO) ಗೆ ಆದೇಶಿಸಿದೆ. ಆದರೆ, ಅದಕ್ಕೆ ಪ್ರತಿಯಾಗಿ TANGEDCO ಗೆ ನೀಡಬೇಕಾದ ಸಬ್ಸಿಡಿ ಮೊತ್ತವನ್ನು ಸಮಯಕ್ಕೆ ಸರಿಯಾಗಿ ಪಾವತಿಸುತ್ತಿಲ್ಲ. ಇದರಿಂದ ನಿಗಮವು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ TANGEDCO ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು.
ಈ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಸಿಜೆಐ ಸೂರ್ಯಕಾಂತ್ ನೇತೃತ್ವದ ಪೀಠವು, ಚುನಾವಣೆಗೂ ಮುನ್ನ ಯಾವಾಗಲೂ ಯೋಜನೆಗಳು ಘೋಷಣೆಯಾಗುತ್ತವೆ? ಇದು ಎಷ್ಟು ಕಾಲ ಮುಂದುವರಿಯುತ್ತದೆ? ಎಂದು ಪ್ರಶ್ನಿಸಿದರು. ಕಲ್ಯಾಣ ಯೋಜನೆಗಳು ಅಗತ್ಯವಿರುವವರಿಗೆ ಸಹಾಯ ಮಾಡಬೇಕು. ಹಾಗಾಗಿ, ಎಲ್ಲರಿಗೂ ಉಚಿತವಾಗಿ ನೀಡುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದೆ.
ಉಚಿತ ಆಹಾರ, ಗ್ಯಾಸ್, ವಿದ್ಯುತ್, ನಗದು ಹಣ ನೀಡಿದರೆ ಜನರು ಏಕೆ ಕೆಲಸ ಮಾಡಬೇಕು? ಗೌರವದಿಂದ ಜೀವಿಸಲು ಕೆಲಸ ಮಾಡಬೇಕು.ಜನರು ಸ್ವಾವಲಂಬಿಗಳಾಗುವಂತೆ ಮಾಡಬೇಕು, ಸರ್ಕಾರಗಳು ಮಾಡುತ್ತಿರುವುದು ಅಪ್ಪೀಸ್‌ಮೆಂಟ್ ಪಾಲಿಸಿ ಎಂದು ಕರೆದ ನ್ಯಾಯಲಯ, ಉಚಿತ ವಸ್ತುಗಳು ಜನರನ್ನು ಕೆಲಸ ಮಾಡದಂತೆ ಮಾಡುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.
ಪೂರ್ವ ಹಣಕಾಸು ಯೋಜನೆ ಇಲ್ಲದೆ ಸರ್ಕಾರಗಳು ದೊಡ್ಡ ಸಬ್ಸಿಡಿ ಬದ್ಧತೆಗಳನ್ನು ಹೇಗೆ ಭರಿಸಲು ಸಾಧ್ಯ ? ಅನಿಯಂತ್ರಿತ ದಾನವು ದೇಶದ ಆರ್ಥಿಕ ಅಭಿವೃದ್ಧಿಗೆ ಅಡ್ಡಿಯಾಗಬಹುದು ಎಂದು ಎಚ್ಚರಿಸಿದೆ.
ಅನೇಕ ರಾಜ್ಯಗಳು ಅಭಿವೃದ್ಧಿ ಯೋಜನೆಗಳಿಗೆ ಆದ್ಯತೆ ನೀಡುವುದಕ್ಕಿಂತ ಉಚಿತ ವಸ್ತುಗಳನ್ನು ವಿತರಿಸುವುದಕ್ಕೆ ಹೆಚ್ಚು ಗಮನ ನೀಡುತ್ತಿದೆ. ಇದರಿಂದ ರಾಜ್ಯಗಳ ಆರ್ಥಿಕ ಸ್ಥಿತಿ ದುರ್ಬಲವಾಗಬಹುದು ಎಂದು ಎಚ್ಚರಿಸಿದ ಸುಪ್ರೀಂ ಕೋರ್ಟ್, ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡಿ ಸೂಚಿಸಿದೆ. ಪ್ರಸ್ತುತ, ಸುಪ್ರೀಂ ಕೋರ್ಟ್ ಈ ವಿಷಯದಲ್ಲಿ ಕೇಂದ್ರ ಸರ್ಕಾರ ಮತ್ತು ಇತರ ಪಕ್ಷಗಳಿಗೆ ನೋಟಿಸ್ ಜಾರಿ ಮಾಡಿದೆ.



