ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶಾದ್ಯಂತ ವರದಿಯಾಗುತ್ತಿರುವ ‘ಡಿಜಿಟಲ್ ಅರೆಸ್ಟ್’ ವಂಚನೆ ಪ್ರಕರಣಗಳ ತನಿಖೆಯನ್ನು ತಕ್ಷಣವೇ ಕೇಂದ್ರೀಯ ತನಿಖಾ ದಳಗೆ ವಹಿಸಿ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ.
ಈ ಜಾಲವು ಪ್ಯಾನ್-ಇಂಡಿಯಾ ಮಟ್ಟದಲ್ಲಿ ಮತ್ತು ಗಡಿಯಾಚೆಗಿನ ವಂಚನೆಗಳನ್ನು ಒಳಗೊಂಡಿರುವುದರಿಂದ, ಏಕರೂಪದ ಮತ್ತು ಕೇಂದ್ರೀಕೃತ ತನಿಖೆಯ ಅಗತ್ಯವಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ನೇತೃತ್ವದ ಪೀಠವು ಈ ಕುರಿತು ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಪ್ರಕರಣದ ವಿಚಾರಣೆ ನಡೆಸಿತು.
ರಾಜ್ಯಗಳಿಗೆ ನೋಟಿಸ್ ಮತ್ತು ಆದೇಶ:
ಕೇಂದ್ರ ಸರ್ಕಾರದ ಜೊತೆಗೆ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೋಟಿಸ್ ಜಾರಿ ಮಾಡಿದ ನ್ಯಾಯಾಲಯವು ಈ ವಂಚನೆಗೆ ಸಂಬಂಧಿಸಿದಂತೆ ಇದುವರೆಗೆ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳನ್ನು ಸಿಬಿಐಗೆ ವರ್ಗಾಯಿಸುವಂತೆ ಸೂಚಿಸಿದೆ.
ನ್ಯಾಯಾಲಯದ ಪ್ರಮುಖ ಅಭಿಪ್ರಾಯ: “ಈ ಕೃತ್ಯವು ವಿದೇಶಗಳಲ್ಲೂ ತನ್ನ ಕೊಂಡಿಗಳನ್ನು ಹೊಂದಿರುವುದರಿಂದ, ಇದರ ಸಮಗ್ರ ತನಿಖೆಗೆ ಜಾಗತಿಕ ಸಹಕಾರ ಅತ್ಯಗತ್ಯವಾಗಿದೆ.”
ವಂಚನೆಯ ಅಂತಾರಾಷ್ಟ್ರೀಯ ಆಯಾಮವನ್ನು ಗಣನೆಗೆ ತೆಗೆದುಕೊಂಡು, ಸೈಬರ್ ಅಪರಾಧದ ವಿರುದ್ಧ ನಿರ್ಣಯವನ್ನು ಅಂಗೀಕರಿಸಲು ವಿಶ್ವಸಂಸ್ಥೆಯ ಸಮಾವೇಶದಲ್ಲಿ ಪ್ರಯತ್ನಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ವಂಚಕರು ನ್ಯಾಯಾಧೀಶರು ಮತ್ತು ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ನಕಲಿ ದಾಖಲೆಗಳನ್ನು ಬಳಸಿಕೊಂಡು ಜನರನ್ನು ಬೆದರಿಸಿ ವಂಚಿಸುತ್ತಿದ್ದಾರೆ. ಈ ಗಂಭೀರ ಅಪರಾಧಗಳ ಬಗ್ಗೆ ಸಮಗ್ರವಾಗಿ ಬೆಳಕು ಚೆಲ್ಲಲು ನ್ಯಾಯಾಲಯವು ಸಿಬಿಐ ತನಿಖೆಗೆ ಆದ್ಯತೆ ನೀಡಿದೆ.
ಕಳೆದ ವಿಚಾರಣೆ ವೇಳೆ, ದೇಶಾದ್ಯಂತದ ಪ್ರಕರಣಗಳನ್ನು ನಿಭಾಯಿಸಲು ಸಿಬಿಐಗೆ ಸಂಪನ್ಮೂಲಗಳಿವೆಯೇ ಎಂದು ನ್ಯಾಯಪೀಠವು ಕೇಂದ್ರವನ್ನು ಪ್ರಶ್ನಿಸಿತ್ತು. ಆಗ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಸಿಬಿಐ ಈಗಾಗಲೇ ಕೆಲವು ಪ್ರಕರಣಗಳನ್ನು ನಿಭಾಯಿಸುತ್ತಿದೆ ಎಂದು ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ನ್ಯಾಯಮೂರ್ತಿ ಬಾಗ್ಚಿ ಅವರು, “ಎಲ್ಲಾ ಪ್ರಕರಣಗಳನ್ನ ನಿರ್ವಹಿಸಲು ಸಿಬಿಐ ಬಳಿ ಅಗತ್ಯ ಸಂಪನ್ಮೂಲಗಳಿವೆಯೇ” ಎಂದು ಪರಿಶೀಲಿಸುವಂತೆ ಸೂಚಿಸಿದ್ದರು. ಅದರ ಬೆನ್ನಲ್ಲೇ ಈಗ ಸಂಪೂರ್ಣ ತನಿಖೆಯನ್ನು ಸಿಬಿಐಗೆ ವಹಿಸಿ ಆದೇಶ ಹೊರಬಿದ್ದಿದೆ.

