Saturday, October 11, 2025

ಮಹಿಳೆ ವಿರುದ್ಧದ ಪೋಕ್ಸೋ ಪ್ರಕರಣ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಕಲಾವಿದೆ ಅರ್ಚನಾ ಪಾಟೀಲ್ ವಿರುದ್ಧ ವಿಚಾರಣಾ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ‌

ಪ್ರಕರಣದ ಆರೋಪಿ ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಸುಂದರೇಶ್ ಹಾಗೂ ಸತೀಶ್ ಚಂದ್ರ ಶರ್ಮಾ ಅವರಿದ್ದ ದ್ವಿಸದಸ್ಯ ಪೀಠವು ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಲು ನಿರ್ದೇಶನ ನೀಡಿದೆ.

ಆರೋಪಿ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ ಲೂತ್ರಾ, ಪೋಕ್ಸೊ ಕಾಯ್ದೆಯ ಸೆಕ್ಷನ್ 3(1)(ಎ) ರಿಂದ 3(1)(ಸಿ) ವರೆಗಿನ ಸೆಕ್ಷನ್‌ಗಳು ನಿರ್ದಿಷ್ಟ ಲಿಂಗದವರಿಗೆ ಅನ್ವಯವಾಗುತ್ತದೆ. ಈ ಪ್ರಕರಣಕ್ಕೆ ಅನ್ವಯ ಆಗುವುದಿಲ್ಲ ಎಂದು ವಾದಿಸಿದರು.

ಚಿತ್ರಕಲೆ ಹೇಳಿಕೊಡುವುದಾಗಿ ಮನೆಗೆ ಕರೆಸಿಕೊಂಡು 13 ವರ್ಷದ ಮಗನ ಮೇಲೆ ಅರ್ಚನಾ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಸಂತ್ರಸ್ತ ಬಾಲಕನ ತಾಯಿ ಹೆಚ್‌ಎಎಲ್ ಠಾಣೆಗೆ 2024ರ ಜೂನ್ 6ರಂದು ದೂರು ನೀಡಿದ್ದರು. ‘ನನ್ನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಬೇಕು’ ಎಂದು ಕೋರಿ ಆರೋಪಿತ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ವೇಳೆ ಪೋಕ್ಸೊ ಕಾಯ್ದೆಗೆ ಬಾಲಕ, ಬಾಲಕಿ ಎಂಬ ಲಿಂಗಬೇಧವಿಲ್ಲ. ಹೂವಿನಂತೆ ಅರಳಬೇಕಾದ ವಯೋಮಾನದಲ್ಲಿ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳನ್ನು ತಡೆಯಲು ರೂಪಿಸಿರುವ ಕಠಿಣ ಶಾಸನವಾಗಿದೆ ಎಂದು ಪೋಕ್ಸೊ ಕಾಯ್ದೆಯನ್ನು ಹೈಕೋರ್ಟ್ ವ್ಯಾಖ್ಯಾನಿಸಿತ್ತು. ಮಹಿಳೆಯ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ರದ್ದುಪಡಿಸಲು ಆಗಸ್ಟ್‌ನಲ್ಲಿ ನಿರಾಕರಿಸಿತ್ತು.

error: Content is protected !!