Thursday, January 29, 2026
Thursday, January 29, 2026
spot_img

ಸರಣಿ ಸೋತರೂ ಸೂರ್ಯ ಕುಗ್ಗಿಲ್ಲ: ಪ್ರಯೋಗಕ್ಕಾಗಿ ಪಂದ್ಯವನ್ನೇ ಪಣಕ್ಕಿಟ್ಟ ಕ್ಯಾಪ್ಟನ್!


ಹೊಸದಿಗಂತ ಡಿಜಿಟಲ್ ಡೆಸ್ಕ್

ವಿಶಾಖಪಟ್ಟಣದ ಎಸಿಎ ಸ್ಟೇಡಿಯಂನಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ ಭಾರತ ತಂಡ ಸೋಲೊಪ್ಪಿಕೊಂಡಿದೆ. ಸರಣಿಯ ಗೆಲುವಿನ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ, ವಿಶ್ವಕಪ್ ದೃಷ್ಟಿಯಿಂದ ನಡೆಸಿದ ಒಂದು ಸಾಹಸಮಯ ಪ್ರಯೋಗ ಟೀಮ್ ಇಂಡಿಯಾ ಪಾಲಿಗೆ ಮುಳುವಾಯಿತು.

ಟಾಸ್ ಗೆದ್ದ ನಾಯಕ ಸೂರ್ಯಕುಮಾರ್ ಯಾದವ್ ಬೌಲಿಂಗ್ ಆಯ್ದುಕೊಂಡಿದ್ದರು. ಆದರೆ ಕಿವೀಸ್ ಬ್ಯಾಟರ್‌ಗಳ ಅಬ್ಬರಕ್ಕೆ ತತ್ತರಿಸಿದ ಭಾರತ 20 ಓವರ್‌ಗಳಲ್ಲಿ 215 ರನ್ ಬಿಟ್ಟುಕೊಟ್ಟಿತು. ಈ ಬೃಹತ್ ಗುರಿ ಬೆನ್ನತ್ತಿದ ಭಾರತ, ಕೇವಲ 18.4 ಓವರ್‌ಗಳಲ್ಲಿ 165 ರನ್‌ಗಳಿಗೆ ಆಲೌಟ್ ಆಗುವ ಮೂಲಕ 50 ರನ್​ಗಳ ಹೀನಾಯ ಸೋಲು ಕಂಡಿತು.

ಈ ಸೋಲಿನ ಹಿಂದೆ ನಾಯಕ ಸೂರ್ಯಕುಮಾರ್ ಯಾದವ್ ಅವರ ಒಂದು ಉದ್ದೇಶಪೂರ್ವಕ ತಂತ್ರವಿತ್ತು. ಪಂದ್ಯದ ಬಳಿಕ ಮಾತನಾಡಿದ ಅವರು, ಈ ಅಚ್ಚರಿಯ ನಿರ್ಧಾರದ ಬಗ್ಗೆ ಸ್ಪಷ್ಟನೆ ನೀಡಿದರು.

“ನಾವು ಉದ್ದೇಶಪೂರ್ವಕವಾಗಿ ಆರು ಬ್ಯಾಟರ್‌ಗಳು ಮತ್ತು ಐದು ಪ್ರಮುಖ ಬೌಲರ್‌ಗಳೊಂದಿಗೆ ಕಣಕ್ಕಿಳಿದಿದ್ದೆವು. 200ರಂತಹ ಬೃಹತ್ ಮೊತ್ತವನ್ನು ಬೆನ್ನಟ್ಟುವಾಗ ಆರಂಭಿಕ ವಿಕೆಟ್ ಕಳೆದುಕೊಂಡರೆ, ಮಧ್ಯಮ ಕ್ರಮಾಂಕ ಹೇಗೆ ಜವಾಬ್ದಾರಿ ತೆಗೆದುಕೊಳ್ಳುತ್ತದೆ ಎಂಬುದನ್ನು ಪರೀಕ್ಷಿಸುವುದು ನಮ್ಮ ಗುರಿಯಾಗಿತ್ತು,” ಎಂದು ಸೂರ್ಯ ತಿಳಿಸಿದರು.

ವಿಶ್ವಕಪ್ ತಂಡದಲ್ಲಿರುವ ಆಟಗಾರರಿಗೆ ಹೆಚ್ಚಿನ ಓವರ್‌ಗಳನ್ನು ಆಡುವ ಅವಕಾಶ ನೀಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಮೊದಲು ಬ್ಯಾಟಿಂಗ್ ಮಾಡುವಾಗ ತಂಡ ಬಲಿಷ್ಠವಾಗಿದ್ದರೂ, ಚೇಸಿಂಗ್ ವೇಳೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲು ಇದು ಅನಿವಾರ್ಯವಾಗಿತ್ತು ಎಂಬುದು ನಾಯಕನ ವಾದ.

ಸೋಲಿನ ಹೊರತಾಗಿಯೂ ಸೂರ್ಯಕುಮಾರ್ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. “ಒಂದು ಅಥವಾ ಎರಡು ಉತ್ತಮ ಪಾಲುದಾರಿಕೆಗಳು ಬಂದಿದ್ದರೆ ಫಲಿತಾಂಶ ಬದಲಾಗುತ್ತಿತ್ತು. ಆದರೆ ಪರವಾಗಿಲ್ಲ, ಮುಂದಿನ ಪಂದ್ಯದಲ್ಲೂ ನಾವು ಚೇಸಿಂಗ್ ಮಾಡುವ ಮೂಲಕ ಈ ಕೌಶಲವನ್ನು ಕರಗತ ಮಾಡಿಕೊಳ್ಳಲು ಬಯಸುತ್ತೇವೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !