January15, 2026
Thursday, January 15, 2026
spot_img

ಸೂರ್ಯವಂಶಿ ಅಬ್ಬರ: ಅಂಡರ್-19 ಏಷ್ಯಾಕಪ್‌ನಲ್ಲಿ ಬಿರುಗಾಳಿ, ಮಲೇಷ್ಯಾ ವಿರುದ್ಧ ಸಿಡಿಲಾರ್ಭಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಂಡರ್-19 ಏಷ್ಯಾಕಪ್ ಟೂರ್ನಿಯಲ್ಲಿ ಭಾರತದ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಆಟ ಮುಂದುವರೆದಿದೆ. ಯುಎಇ ವಿರುದ್ಧ ಅಸಾಮಾನ್ಯ ಶತಕ ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದ ವೈಭವ್, ಇದೀಗ ಮಲೇಷ್ಯಾ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 25 ಎಸೆತಗಳಲ್ಲಿ ಸಿಡಿಲಬ್ಬರದ ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದಾರೆ.

ದುಬೈನ ಸೆವೆನ್ಸ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಮಲೇಷ್ಯಾ ಬೌಲಿಂಗ್ ಆಯ್ದುಕೊಂಡಿತು. ಪ್ರಥಮವಾಗಿ ಬ್ಯಾಟಿಂಗ್ ಮಾಡಿದ ಭಾರತಕ್ಕೆ ಆರಂಭಿಕರಾದ ವೈಭವ್ ಸೂರ್ಯವಂಶಿ ಬಿರುಸಿನ ಆರಂಭ ಒದಗಿಸಿದರು. ಮೊದಲ ಓವರ್‌ನಿಂದಲೇ ಮಲೇಷ್ಯಾ ಬೌಲರ್‌ಗಳ ಮೇಲೆ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿದ ಎಡಗೈ ದಾಂಡಿಗ ವೈಭವ್, ಮೈದಾನದ ನಾಲ್ಕೂ ದಿಕ್ಕುಗಳಲ್ಲಿ ಅಬ್ಬರಿಸಿದರು. ಅವರ ಅರ್ಧಶತಕದ ಇನ್ನಿಂಗ್ಸ್‌ನಲ್ಲಿ 3 ಭರ್ಜರಿ ಸಿಕ್ಸರ್‌ಗಳು ಮತ್ತು 5 ಆಕರ್ಷಕ ಬೌಂಡರಿಗಳು ಮೂಡಿಬಂದವು.

ಆದರೆ, ಅರ್ಧಶತಕದ ನಂತರ ಬಿರುಸಿನ ಹೊಡೆತಕ್ಕೆ ಯತ್ನಿಸಿ ಔಟಾದ ವೈಭವ್ ತಮ್ಮ ಇನ್ನಿಂಗ್ಸ್‌ಗೆ ತೆರೆ ಎಳೆದರು.

ಇದೇ ಟೂರ್ನಿಯಲ್ಲಿ ವೈಭವ್ ಈಗಾಗಲೇ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಯುಎಇ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 95 ಎಸೆತಗಳನ್ನು ಎದುರಿಸಿದ್ದ ಅವರು 14 ಸಿಕ್ಸರ್‌ಗಳು ಮತ್ತು 9 ಬೌಂಡರಿಗಳ ನೆರವಿನಿಂದ 171 ರನ್ ಗಳಿಸಿ ಅಬ್ಬರಿಸಿದ್ದರು. ಈ ಭರ್ಜರಿ ಇನ್ನಿಂಗ್ಸ್ ಮೂಲಕ ಅಂಡರ್-19 ಪಂದ್ಯದಲ್ಲಿ ಅತ್ಯಧಿಕ ಸಿಕ್ಸರ್‌ಗಳನ್ನು ಸಿಡಿಸಿದ ವಿಶ್ವ ದಾಖಲೆಯನ್ನು ಅವರು ತಮ್ಮ ಹೆಸರಿಗೆ ಬರೆದುಕೊಂಡಿದ್ದರು.

ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಕೇವಲ 5 ರನ್ ಗಳಿಸಿ ನಿರಾಸೆ ಮೂಡಿಸಿದ್ದ ವೈಭವ್, ಮಲೇಷ್ಯಾ ವಿರುದ್ಧದ ಈ ಸ್ಪೋಟಕ ಅರ್ಧಶತಕದ ಮೂಲಕ ಮತ್ತೆ ಲಯಕ್ಕೆ ಮರಳಿದ್ದಾರೆ. ಟೂರ್ನಿಯ 3 ಇನ್ನಿಂಗ್ಸ್‌ಗಳಿಂದ ವೈಭವ್ ಸೂರ್ಯವಂಶಿ ಒಟ್ಟು 226 ರನ್ ಕಲೆಹಾಕಿ ಮಿಂಚುತ್ತಿದ್ದಾರೆ.

Most Read

error: Content is protected !!