ಹೊಸದಿಗಂತ ವರದಿ ಮಂಡ್ಯ :
ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪತಿಯೇ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಕಾಳೇನಹಳ್ಳಿ ಗ್ರಾಮದಲ್ಲಿ ಮಂಗಳವಾರ ತಡ್ರಾತ್ರಿ ನಡೆದಿದೆ.
ಗ್ರಾಮದ ಲೋಕೇಶ್ ಪತ್ನಿ ಶ್ವೇತಾ (36) ಎಂಬಾಕೆಯೇ ಕೊಲೆಯಾದ ಮಹಿಳೆಯಾಗಿದ್ದಾಳೆ. ಈಕೆಯ ಪತಿ ಲೋಕೇಶ್ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.
ಕಳೆದ ಸುಮಾರು 17 ವರ್ಷಗಳ ಹಿಂದೆ ಲೋಕೇಶ್ ಕೂಲಿ ಕೆಲಸ ಮಾಡುತ್ತಿದ್ದಾಗ ಶ್ವೇತಾ ಪರಿಚಯವಾಗಿದ್ದಾಳೆ. ನಂತರ ಇವರಿಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಒಬ್ಬಳು ಮಗಳಿದ್ದಾಳೆ. ಕಳೆದ ನಾಲ್ಕು ವರ್ಷಗಳ ಹಿಂದೆ ಗ್ರಾಮಕ್ಕೆ ವಾಪಸವಾಗಿ ಜಮೀನಿನಲ್ಲಿ ಮನೆ ಕಟ್ಟಿಕೊಂಡು ವಾಸವಾಗಿದ್ದ.
ಇತ್ತೀಚೆಗೆ ಲೋಕೇಶ ಕುಡಿತದ ಚಟ ಅಂಟಿಸಿಕೊಂಡಿದ್ದ. ನಿತ್ಯ ಪತ್ನಿಗೆ ಅನುಮಾನದಿಂದ ದೈಹಿಕ ಹಿಂಸೆ ನೀಡುತ್ತಿದ್ದನೆನ್ನಲಾಗಿದೆ. ಜೊತೆಗೆ ಹಣಕ್ಕಾಗಿಯೂ ಗಲಾಟೆ ಮಾಡುತ್ತಿದ್ದ. ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ಮಂಗಳವಾರ ತಡರಾತ್ರಿ ಸಮಯದಲ್ಲಿ ದಂಪತಿ ನಡುವೆ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಜಗಳ ಉಂಟಾಗಿ ಲೋಕೇಶ್ ತನ್ನ ಪತ್ನಿ ಶ್ವೇತಾಳನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಘಟನೆ ನಂತರ ಆರೋಪಿ ಲೋಕೇಶ್ ಪರಾರಿಯಾಗಿದ್ದಾನೆ.
ಸುದ್ಧಿ ತಿಳಿದ ತಕ್ಷಣ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಅನೈತಿಕ ಸಂಬಂಧ ಶಂಕೆ: ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿದ ಪತಿ

