ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈನಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್‌ನಲ್ಲಿ ಭಾರೀ ಮೊತ್ತದ ನಗದು ಮತ್ತು ಚಿನ್ನಾಭರಣಗಳನ್ನು ಸಾಗಿಸುತ್ತಿದ್ದ ಪ್ರಕರಣವೊಂದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಬೆಳಕಿಗೆ ಬಂದಿದೆ. ಭಟ್ಕಳ ಶಹರ ಪೊಲೀಸರು ನಡೆಸಿದ ತಪಾಸಣೆಯಲ್ಲಿ 401 ಗ್ರಾಂ ತೂಕದ 32 ಚಿನ್ನದ ಬಳೆಗಳು ಮತ್ತು ಬರೋಬ್ಬರಿ 50 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಘಟನೆ?
ಪೊಲೀಸರ ತಪಾಸಣೆ ವೇಳೆ ಬಸ್‌ನಲ್ಲಿದ್ದ ಸೂಟ್‌ಕೇಸ್‌ವೊಂದರ ಮೇಲೆ ಪೊಲೀಸರಿಗೆ ಸಂಶಯ ಬಂದಿದೆ. ಈ ಸೂಟ್‌ಕೇಸ್ ಅನ್ನು ‘ಸ್ವೀಟ್ ಬಾಕ್ಸ್’ ಮಾದರಿಯ ಕವರ್‌ನಲ್ಲಿ ಬಚ್ಚಿಡಲಾಗಿತ್ತು. ಅದನ್ನು ತೆರೆದು ನೋಡಿದಾಗ, ಅದರೊಳಗೆ ಕಂತೆ ಕಂತೆ ಹಣ ಮತ್ತು ಚಿನ್ನದ ಬಳೆಗಳು ಪತ್ತೆಯಾಗಿವೆ.
ಚಾಲಕನ ಹೇಳಿಕೆ:
ಪೊಲೀಸರ ವಿಚಾರಣೆ ವೇಳೆ ಬಸ್ ಚಾಲಕ ನೀಡಿರುವ ಹೇಳಿಕೆಯ ಪ್ರಕಾರ, ಮುಂಬೈನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಈ ಸೂಟ್‌ಕೇಸ್ ಅನ್ನು ತನ್ನ ಕೈಗೆ ನೀಡಿ, “ಮಂಗಳೂರು ಬಸ್ ನಿಲ್ದಾಣದಲ್ಲಿ ‘ಇರ್ಫಾನ್’ ಎಂಬುವವರು ಬಂದು ಬಸ್ ಸಂಖ್ಯೆ ಹೇಳಿ ಇದನ್ನು ಪಡೆದುಕೊಳ್ಳುತ್ತಾರೆ” ಎಂದು ತಿಳಿಸಿದ್ದನು.
ಸದ್ಯ ಪೊಲೀಸರು ಬಸ್ ಚಾಲಕನಿಂದ ನಗದು ಮತ್ತು ಚಿನ್ನವನ್ನು ವಶಪಡಿಸಿಕೊಂಡಿದ್ದು, ಇದರ ಮಾಲೀಕರು ಯಾರು? ಅನಾಮಿಕ ವ್ಯಕ್ತಿ ಯಾರು? ಹಾಗೂ ಈ ಹಣ ಮತ್ತು ಚಿನ್ನವನ್ನು ಏಕೆ ಮತ್ತು ಎಲ್ಲಿಗೆ ಸಾಗಿಸಲಾಗುತ್ತಿತ್ತು ಎಂಬ ಬಗ್ಗೆ ತನಿಖೆಯನ್ನು ತೀವ್ರಗೊಳಿಸಿದ್ದಾರೆ.

