ಹೊಸದಿಗಂತ ವರದಿ, ಚಿತ್ರದುರ್ಗ
ಸ್ವದೇಶಿ ಜಾಗರಣ ಮಂಚ್ ಚಿತ್ರದುರ್ಗ ವತಿಯಿಂದ ಸ್ವಾವಲಂಬನೆ ಪರಿಕಲ್ಪನೆ ಹಿನ್ನೆಲೆಯಲ್ಲಿ ನ.೧೨ ರಿಂದ ೧೬ ರವರೆಗೆ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಸ್ವದೇಶಿ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷರು ಹಾಗೂ ಸಂಸದ ಗೋವಿಂದ ಕಾರಜೋಳ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.೧೨ ರಂದು ಸಂಜೆ ೪ ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಪ್ರತಿದಿನ ಬೆಳಿಗ್ಗೆ ೧೦ ರಿಂದ ರಾತ್ರಿ ೯ ಗಂಟೆವರೆಗೆ ಮೇಳ ನಡೆಯಲಿದೆ. ಐದು ದಿನಗಳ ಕಾಲ ನಡೆಯುವ ಈ ಮೇಳದಲ್ಲಿ ಸ್ವದೇಶಿ ಉತ್ಪನ್ನಗಳ ಮಾರಾಟ ಮಾಡಲಾಗುವುದು. ನ.೧೬ ರಂದು ಸಮಾರೋಪ ಸಮಾರಂಭ ನಡೆಯಲಿದೆ ಎಂದರು.
ಮೇಳದಲ್ಲಿ ನಿತ್ಯ ಬಳಕೆ ವಸ್ತುಗಳ ತಯಾರಿಕಾ ಶಿಬಿರ, ಆಯುರ್ವೇದ ಶಿಬಿರ ಹಾಗೂ ಪಂಚಗವ್ಯ ಚಿಕಿತ್ಸಾ ಶಿಬಿರ ನಡೆಸಲಾಗುವುದು. ಅದರಂತೆ ಮಹಿಳಾ ಸಮಾವೇಶ, ಯುವ ಸಮಾವೇಶ ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ದೇಸಿ ಕ್ರೀಡೆಗಳು, ಜನಪದ ಕಲಾ ವೈಭವ ಸೇರಿದಂತೆ ಸ್ಥಳೀಯ ಹಾಗೂ ಸಾಂಸ್ಕೃತಿಕ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಹೆಚ್.ಡಿ.ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ ಹಾಗೂ ವಿ.ಸೋಮಣ್ಣ ಅವರನ್ನು ಆಹ್ವಾನಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಜಿಲ್ಲೆಯ ವಿವಿಧ ಕ್ಷೇತ್ರಗಳ ಶಾಸಕರು, ಮಾಜಿ ಶಾಸಕರು ಸೇರಿದಂತೆ ಹಲವು ಜನಪ್ರತಿನಿಧಿಗಳು ಭಾಗವಹಿಸುವರು. ಸ್ವದೇಶಿ ಪರಿಕಲ್ಪನೆ ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ಪೂರ್ವಜರು ಕಂಡ ಕನಸು. ಈಗ ಪ್ರಧಾನಿ ನರೇಂದ್ರ ಮೋದಿಯವರು ಇದಕ್ಕೆ ಒತ್ತು ನೀಡಿದ್ದು, ಅಂದಿನ ಕನಸು ಇಂದು ನನಸಾಗುತ್ತಿದೆ ಎಂದರು.
ಸ್ವದೇಶಿ ಮೇಳದ ಸಂಯೋಜಕರು ಹಾಗೂ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಸ್ವದೇಶಿ ಮೇಳ ನಡೆಸುವ ಕುರಿತು ಮನೆ ಮನೆಗೆ ಕರಪತ್ರ ನೀಡಿ ಪ್ರಚಾರ ಮಾಡಲಾಗುವುದು. ಇಂದು ಈ ಕಾರ್ಯಕ್ಕೆ ಸಂಸದ ಗೋವಿಂದ ಕಾರಜೋಳ ಅವರು ಚಾಲನೆ ನೀಡಲಿದ್ದಾರೆ. ಸ್ವದೇಶಿ ವಸ್ತುಗಳ ಮಾರಾಟಕ್ಕೆ ೨೦೦ ಮಳಿಗೆಗಳನ್ನು ನಿರ್ಮಿಸಲಾಗಿದೆ. ಈಗಾಗಲೇ ೧೬೦ ಮಳಿಗೆಗಳು ಬುಕ್ ಆಗಿವೆ. ಜಿಲ್ಲೆಯ ಸಣ್ಣಪುಟ್ಟ ಉದ್ಯಮಿಗಳು ಈ ಮಳಿಗೆಗಳಲ್ಲಿ ವ್ಯಾಪಾರ ವಹಿವಾಟು ನಡೆಸಲಿದ್ದಾರೆ. ಕೃಷಿ, ತೋಟಗಾರಿಕೆ ಹಾಗೂ ಪಶು ಸಂಗೋಪನಾ ಇಲಾಖೆ ವತಿಯಿಂದ ರೈತರಿಗೆ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗುವುದು. ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಸಂಚಾಲಕರಾದ ಸೌಭಾಗ್ಯ ಬಸವರಾಜನ್, ಸಹ ಸಂಚಾಲಕ ಹನುಮಂತೇಗೌಡ, ಸಹ ಸಂಘಟಕರಾದ ಕೆ.ಟಿ.ಕುಮಾರಸ್ವಾಮಿ, ಲಕ್ಷ್ಮಿಕಾಂತ್, ಮಾಧುರಿ ಗಿರೀಶ್, ಎ.ಮುರುಳಿ ಮತ್ತಿತರರು ಹಾಜರಿದ್ದರು.

