ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ತಮ್ಮ ಸ್ವಕ್ಷೇತ್ರದ ಪಿಲ್ಲಹಳ್ಳಿಯಲ್ಲಿ ನಡೆದ ದಂಡಿಮಾರಮ್ಮ ದೇವಾಲಯದ ಪ್ರತಿಷ್ಠಾಪನೆ ಹಾಗೂ ಕುಂಭ ಕಳಶೋತ್ಸವದಲ್ಲಿ ಪಾಲ್ಗೊಂಡು ಭಕ್ತಿ ಭಾವ ಮೆರೆದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕ್ಷೇತ್ರದ ಜನರೊಂದಿಗೆ ತಮಗಿರುವ ಅವಿನಾಭಾವ ಸಂಬಂಧವನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹಳೆಯ ದಿನಗಳಿಗೆ ಜಾರಿದ ಸಿಎಂ, “ನಮ್ಮೂರಿನಲ್ಲೂ ದಂಡಿನ ಮಾರಮ್ಮನ ದೇವಸ್ಥಾನವಿದೆ. ನಾನು ಚಿಕ್ಕವನಿದ್ದಾಗ ದೇವಸ್ಥಾನಕ್ಕೆ ತಂಬಿಟ್ಟು ಆರತಿ ಹೊತ್ತುಕೊಂಡು ಹೋಗುತ್ತಿದ್ದೆ. ಅಂದು ಆರತಿ ಮುಗಿದ ಮೇಲೆ ಸಿಗುತ್ತಿದ್ದ ಆ ತಂಬಿಟ್ಟು ಮತ್ತು ಕೊಬ್ಬರಿ ಮಿಠಾಯಿ ಸವಿಯುವುದೇ ಒಂದು ದೊಡ್ಡ ಸಂಭ್ರಮವಾಗಿತ್ತು,” ಎಂದು ನಸುನಗುತ್ತಾ ತಮ್ಮ ಬಾಲ್ಯದ ಮಧುರ ಕ್ಷಣಗಳನ್ನು ನೆನಪಿಸಿಕೊಂಡರು.
ದೈವ ಭಕ್ತಿಯ ಬಗ್ಗೆ ಮಾತನಾಡಿದ ಅವರು, “ದೇವರು ಗುಡಿಯ ಒಳಗಿರುತ್ತಾನೆ ಎಂಬುದು ನಂಬಿಕೆ. ಪೂಜೆ ಮಾಡುವುದರಿಂದ ಒಳ್ಳೆಯದಾಗುತ್ತದೆ ಎಂಬ ಜನರ ವಿಶ್ವಾಸಕ್ಕೆ ನಾನು ಎಂದೂ ವಿರೋಧವಾಗಿಲ್ಲ,” ಎನ್ನುವ ಮೂಲಕ ಧರ್ಮ ಮತ್ತು ನಂಬಿಕೆಯ ಬಗ್ಗೆ ತಮ್ಮ ತರ್ಕಬದ್ಧ ನಿಲುವನ್ನು ವ್ಯಕ್ತಪಡಿಸಿದರು.
“ಚಾಮುಂಡೇಶ್ವರಿ ಮತ್ತು ವರುಣಾ ಕ್ಷೇತ್ರದ ಜನ ನನ್ನನ್ನು ಯಾವತ್ತೂ ಕೈಬಿಟ್ಟಿಲ್ಲ. ವಿಶೇಷವಾಗಿ ಪಿಲ್ಲಹಳ್ಳಿಯ ಜನರ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಸದಾ ಋಣಿಯಾಗಿದ್ದೇನೆ,” ಎಂದು ಭಾವನಾತ್ಮಕವಾಗಿ ನುಡಿದರು.



