ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾ ವಿರುದ್ಧ ನಡೆದ ಟಿ20 ಸರಣಿಯಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ನೀಡಿ ಸರಣಿಯನ್ನು ಗೆದ್ದುಕೊಂಡಿದೆ. ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ತಂಡವು ಅತ್ಯುತ್ತಮ ಪ್ರದರ್ಶನ ತೋರಿತು. ವಾಷಿಂಗ್ಟನ್ ಸುಂದರ್ ತಮ್ಮ ಆಲ್‌ರೌಂಡ್ ಪ್ರತಿಭೆಯಿಂದ ತಂಡದ ಗೆಲುವಿಗೆ ಪ್ರಮುಖ ಕಾರಣರಾದರು. ಅವರ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಪ್ರದರ್ಶನದಿಂದ ಅವರು ‘ಸರಣಿಯ ಇಂಪ್ಯಾಕ್ಟ್ ಪ್ಲೇಯರ್’ ಪ್ರಶಸ್ತಿ ಗಳಿಸಿದರು.
ಸರಣಿಯ ಆರಂಭದಲ್ಲಿ ಭಾರತ ಹಿನ್ನಡೆಯಲ್ಲಿದ್ದರೂ, ಬಳಿಕ ಸತತ ಎರಡು ಪಂದ್ಯಗಳನ್ನು ಗೆದ್ದು ಆಸ್ಟ್ರೇಲಿಯಾದ ಮೇಲೆ ಪ್ರಾಬಲ್ಯ ಸಾಧಿಸಿತು. ಹೋಬಾರ್ಟ್‌ನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಸುಂದರ್ ಬ್ಯಾಟಿಂಗ್‌ನಲ್ಲಿ ಮಿಂಚಿ, ಕೇವಲ 23 ಎಸೆತಗಳಲ್ಲಿ ನಾಲ್ಕು ಸಿಕ್ಸರ್‌ಗಳು ಹಾಗೂ ಮೂರು ಬೌಂಡರಿಗಳ ಸಹಾಯದಿಂದ 49 ರನ್‌ಗಳ ಅಮೂಲ್ಯ ಇನ್ನಿಂಗ್ಸ್ ಆಡಿದರು. ಅವರ ಅದ್ಭುತ ಆಟದ ನೆರವಿನಿಂದ ಭಾರತ ಐದು ವಿಕೆಟ್‌ಗಳ ಗೆಲುವು ಸಾಧಿಸಿತು.
ಅಲ್ಲದೆ ನಾಲ್ಕನೇ ಪಂದ್ಯದಲ್ಲಿ ಸುಂದರ್ ಬೌಲಿಂಗ್‌ನಲ್ಲಿಯೂ ಮಿಂಚಿ, ಕೇವಲ ಎರಡು ಓವರ್‌ಗಳಲ್ಲಿ ಮೂರು ವಿಕೆಟ್‌ಗಳನ್ನು ಪಡೆದು ಆಸ್ಟ್ರೇಲಿಯಾದ ಗೆಲುವಿನ ಆಸೆಯನ್ನು ಸಂಪೂರ್ಣವಾಗಿ ನಾಶಮಾಡಿದರು. ಸರಣಿಯ ಅಂತ್ಯದಲ್ಲಿ ತಂಡದ ಡ್ರೆಸ್ಸಿಂಗ್ ರೂಮ್‌ನಲ್ಲಿ ಅವರಿಗೆ ‘ಸರಣಿಯ ಇಂಪ್ಯಾಕ್ಟ್ ಪ್ಲೇಯರ್’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಸುಂದರ್, “ಆಸ್ಟ್ರೇಲಿಯಾದಲ್ಲಿ ಆಡಲು ಅವಕಾಶ ಸಿಕ್ಕಿರುವುದು ಅದ್ಭುತ ಅನುಭವ. ತಂಡದ ಗೆಲುವಿಗೆ ಕೊಡುಗೆ ನೀಡಿದ್ದಕ್ಕೆ ಸಂತೋಷವಾಗುತ್ತಿದೆ,” ಎಂದು ಹೇಳಿದ್ದಾರೆ.

