ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್ 2026ಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗ ಆಸ್ಟ್ರೇಲಿಯಾ ಕ್ರಿಕೆಟ್ ತಂಡದಲ್ಲಿ ಗಾಯದ ಚಿಂತೆ ಹೆಚ್ಚಾಗಿತ್ತು. ಪ್ರಮುಖ ಆಟಗಾರರು ಗಾಯಗೊಂಡಿದ್ದ ಕಾರಣ ಕ್ರಿಕೆಟ್ ಆಸ್ಟ್ರೇಲಿಯಾ ತಾತ್ಕಾಲಿಕ ತಂಡವನ್ನು ಪ್ರಕಟಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಇದೀಗ ವೇಗದ ಬೌಲರ್ ಜೋಶ್ ಹೇಝಲ್‌ವುಡ್ ಅವರಿಂದ ತಂಡಕ್ಕೆ ಒಳ್ಳೆಯ ಸುದ್ದಿ ಸಿಕ್ಕಿದೆ.
ಸ್ನಾಯು ಸೆಳೆತ ಮತ್ತು ಅಕಿಲೀಸ್ ಸಮಸ್ಯೆಯಿಂದ ಬಳಲುತ್ತಿದ್ದ ಹೇಝಲ್‌ವುಡ್ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಇದೇ ವಾರದಿಂದ ಅವರು ಮತ್ತೆ ಅಭ್ಯಾಸ ಆರಂಭಿಸುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.
ವಿಶ್ವಕಪ್ ಆರಂಭಕ್ಕೂ ಮುನ್ನ ಸಂಪೂರ್ಣ ಫಿಟ್‌ನೆಸ್‌ನೊಂದಿಗೆ ಅವರು ಕಣಕ್ಕಿಳಿಯಲಿದ್ದಾರೆ ಎನ್ನುವುದು ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ಬಲವಾಗಿದೆ. ಈ ಮೂಲಕ ಟೂರ್ನಿಯಲ್ಲಿ ಮಿಚೆಲ್ ಸ್ಟಾರ್ಕ್ ಜೊತೆಗೆ ಹೇಝಲ್‌ವುಡ್ ಪ್ರಮುಖ ವೇಗಿಯ ಆಯ್ಕೆಯಾಗಲಿದ್ದಾರೆ.
ಇನ್ನು ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡ ಗ್ರೂಪ್–2ರಲ್ಲಿ ಸ್ಥಾನ ಪಡೆದಿದೆ. ಮೊದಲ ಸುತ್ತಿನಲ್ಲಿ ಶ್ರೀಲಂಕಾ, ಝಿಂಬಾಬ್ವೆ, ಐರ್ಲೆಂಡ್ ಮತ್ತು ಒಮಾನ್ ತಂಡಗಳ ವಿರುದ್ಧ ಪಂದ್ಯಗಳನ್ನು ಆಡಲಿದೆ. ಈ ತಂಡಗಳನ್ನು ಎದುರಿಸಿ ದ್ವಿತೀಯ ಸುತ್ತಿಗೆ ಆಸ್ಟ್ರೇಲಿಯಾ ಪ್ರವೇಶಿಸುವುದು ಬಹುತೇಕ ಖಚಿತ ಎನ್ನಲಾಗಿದೆ.
ಪ್ರಕಟಿಸಿದ ತಾತ್ಕಾಲಿಕ ತಂಡದಲ್ಲಿ ಮಿಚೆಲ್ ಮಾರ್ಷ್ ನಾಯಕತ್ವ ವಹಿಸಿದ್ದು, ಪ್ಯಾಟ್ ಕಮ್ಮಿನ್ಸ್, ಟ್ರಾವಿಸ್ ಹೆಡ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್ ಮತ್ತು ಆ್ಯಡಂ ಝಂಪಾ ಸೇರಿದಂತೆ ಅನುಭವಿ ಆಟಗಾರರು ಸ್ಥಾನ ಪಡೆದಿದ್ದಾರೆ. ಗಾಯದ ಆತಂಕದ ನಡುವೆಯೂ ಆಸ್ಟ್ರೇಲಿಯಾ ವಿಶ್ವಕಪ್‌ಗೆ ಬಲಿಷ್ಠ ಸಿದ್ಧತೆಯಲ್ಲಿದೆ ಎಂಬುದು ಸ್ಪಷ್ಟವಾಗಿದೆ.

