ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಶ್ರೀಲಂಕಾ ಸಂಯುಕ್ತವಾಗಿ ಆತಿಥ್ಯ ವಹಿಸಿರುವ ಟಿ20 ವಿಶ್ವಕಪ್ 2026 ಫೆಬ್ರವರಿ 7ರಿಂದ ಆರಂಭವಾಗುತ್ತಿದ್ದು, ಈ ಬಾರಿ ಭಾರತ ಮತ್ತು ಪಾಕಿಸ್ತಾನ್ ಒಂದೇ ಗುಂಪಿನಲ್ಲಿ ಸೇರಿರುವುದು ಪ್ರಮುಖ ಆಕರ್ಷಣೆಯಾಗಿದೆ. ಒಟ್ಟು 20 ತಂಡಗಳನ್ನು 4 ಗುಂಪುಗಳಾಗಿ ಹಂಚಲಾಗಿದ್ದು, ಭಾರತ ಯುಎಸ್‌ಎ, ನಮೀಬಿಯಾ, ನೆದರ್ಲೆಂಡ್ಸ್ ಹಾಗೂ ಪಾಕಿಸ್ತಾನ್ ತಂಡಗಳನ್ನು ಮೊದಲ ಹಂತದಲ್ಲಿ ಎದುರಿಸಲಿದೆ.
ಟೀಮ್ ಇಂಡಿಯಾ (ಭಾರತ vs ಯುಎಸ್‌ಎ- ಮುಂಬೈ), (ಭಾರತ vs ನಮೀಬಿಯಾ-ದೆಹಲಿ), (ಭಾರತ vs ಪಾಕಿಸ್ತಾನ್- ಕೊಲಂಬೊ) ಮತ್ತು (ಭಾರತ vs ನೆದರ್ಲೆಂಡ್ಸ್- ಅಹಮದಾಬಾದ್) ನಲ್ಲಿ ತಮ್ಮ ಲೀಗ್ ಪಂದ್ಯಗಳನ್ನು ಆಡಲಿದ್ದು, ಈ ಹಂತದ ನಂತರ ಶ್ರೇಷ್ಠ ಎಂಟು ತಂಡಗಳೊಂದಿಗೆ ಸೂಪರ್-8 ರಣರಂಗ ಶುರುವಾಗಲಿದೆ.
ಸೂಪರ್-8 ಅಂಕ ಪಟ್ಟಿಯಲ್ಲಿ ಮೊದಲ ನಾಲ್ಕು ಸ್ಥಾನಗಳಲ್ಲಿ ಕಾಣಿಸಿಕೊಳ್ಳುವ ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸಲಿವೆ. ಸೆಮಿಫೈನಲ್‌ಗಾಗಿ ಮುಂಬೈ ಮತ್ತು ಕೊಲ್ಕತ್ತಾ ವೇದಿಕೆಗಳಾಗಿದ್ದು, ಪಾಕಿಸ್ತಾನ ಅರ್ಹರಾದರೆ ಪಂದ್ಯವನ್ನು ಕೊಲಂಬೊಗೆ ಸ್ಥಳಾಂತರಿಸುವ ಸಾಧ್ಯತೆಯಿದೆ.
ಮಾರ್ಚ್ 8ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಫೈನಲ್‌ಗೆ ಸಜ್ಜಾಗುತ್ತಿದ್ದು, ಬೃಹತ್ ಕ್ರೀಡಾರಂಗಕ್ಕೆ ಸಾಕ್ಷಿಯಾಗಲಿದೆ. ಪಾಕಿಸ್ತಾನ ಅಂತಿಮ ಹಂತಕ್ಕೆ ತಲುಪಿದರೆ, ಫೈನಲ್ ಪಂದ್ಯವನ್ನು ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂಗೆ ವರ್ಗಾಯಿಸಲಾಗುತ್ತದೆ. 2026ರ ಟೂರ್ನಿಯಲ್ಲಿ ನಾಲ್ಕು ಬಲಿಷ್ಠ ಗುಂಪುಗಳು ವೈಭವದ ಕ್ರೀಡಾಸ್ಪರ್ಧೆಗೆ ಸಜ್ಜಾಗಿವೆ.

