ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್ ಇಂಗ್ಲೆಂಡ್ ಇಂದು ಇಟಲಿ ವಿರುದ್ಧ ಗೆದ್ದು ಸೂಪರ್ 8 ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ.
ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 202 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಇಟಲಿಗೆ ಜೋಫ್ರಾ ಆರ್ಚರ್ ಮೊದಲ ಓವರ್‌ನಲ್ಲಿ ಎರಡು ವಿಕೆಟ್ ಕಬಳಿಸಿ ಆಘಾತ ನೀಡಿದರು. ಬಳಿಕ ಜೊತೆಯಾದ ಜಸ್ಟಿನ್ ಮೊಸ್ಕಾ ಮತ್ತು ಬೆನ್ ಮಾನೆಂಟಿ ಇಂಗ್ಲಿಷ್ ಬೌಲರ್‌ಗಳ ಬೆವರಿಳಿಸಿ 92 ರನ್‌ಗಳ ಸ್ಫೋಟಕ ಪಾಲುದಾರಿಕೆಯನ್ನು ರೂಪಿಸಿದರು. ಮಾನೆಂಟಿ ಕೇವಲ 22 ಎಸೆತಗಳಲ್ಲಿ ಇಟಲಿ ಪರ ವೇಗದ ಅರ್ಧಶತಕವನ್ನು ಬಾರಿಸಿದರು. ವಿಲ್ ಜ್ಯಾಕ್ಸ್ ಅಂತಿಮವಾಗಿ ಮಾನೆಂಟಿಯನ್ನು ಔಟ್ ಮಾಡುವ ಮೂಲಕ ಈ ಪಾಲುದಾರಿಕೆಯನ್ನು ಮುರಿದರು.
18 ನೇ ಓವರ್‌ನಲ್ಲಿ ಆದಿಲ್ ರಶೀದ್ ಅವರ ಓವರ್‌ನಲ್ಲಿ ಮೂರು ಸಿಕ್ಸರ್‌ಗಳನ್ನು ಸಿಡಿಸಿದರು. ಹೀಗಾಗಿ ಕೊನೆಯ ಎರಡು ಓವರ್‌ಗಳಲ್ಲಿ ಇಟಲಿ ಗೆಲುವಿಗೆ 30 ರನ್ ಬೇಕಿದ್ದವು. ಆದರೆ ಈ ವೇಳೆ ದಾಳಿಗಿಳಿದ ಕರನ್ 19ನೇ ಓವರ್‌ನಲ್ಲಿ ಕೇವಲ ಐದು ರನ್‌ಗಳನ್ನು ಬಿಟ್ಟುಕೊಟ್ಟು ಸ್ಟೀವರ್ಟ್ ಅವರ ವಿಕೆಟ್ ಪಡೆದರು. ಅಂತಿಮವಾಗಿ ಇಟಲಿ ಇನ್ನಿಂಗ್ಸ್‌ನ ಕೊನೆಯ ಎಸೆತದಲ್ಲಿ 178 ರನ್‌ಗಳಿಗೆ ಆಲೌಟ್ ಆಯಿತು.



