ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ ತಾಲಿಬಾನ್ ವಿದೇಶಾಂಗ ಸಚಿವ ಆಮೀರ್ ಖಾನ್ ಮುತ್ತಖಿ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದಾಗ ಮಹಿಳಾ ಪತ್ರಕರ್ತರಿಗೆ ಭಾಗವಹಿಸಲು ಅವಕಾಶ ನೀಡದೆ ವಿಮರ್ಶೆಗೆ ಒಳಗಾದ ಘಟನೆ ನಡೆದಿದೆ. ಇದು ದೇಶದಾದ್ಯಂತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯ ವಿಷಯವಾಗಿದೆ.
ಅಕ್ಟೋಬರ್ 10 ರಂದು ಭಾರತೀಯ ವಿದೇಶಾಂಗ ಸಚಿವೆ ಎಸ್. ಜೈಶಂಕರ್ ತಾಲಿಬಾನ್ ವಿದೇಶಾಂಗ ಸಚಿವ ಮುತ್ತಖಿಯನ್ನು ಭೇಟಿಯಾದರು. ಬಳಿಕ ಆಮೀರ್ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಪತ್ರಕರ್ತರು ಹೊರಗುಳಿಯಬೇಕಾಯಿತು. ಮತ್ತೊಂದು ದೇಶದ ನಾಯಕನೊಬ್ಬ ನವದೆಹಲಿಯಲ್ಲಿ ಅಧಿಕೃತ ಮಾಧ್ಯಮಗೋಷ್ಠಿ ನಡೆಸಿ ಮಹಿಳಾ ಪತ್ರಕರ್ತರನ್ನು ಹೊರಗಿಡುವುದು ಅಸಾಮಾನ್ಯ ಎಂದು ಭಾರತ ಹೇಳಿದೆ. ಪತ್ರಿಕಾಗೋಷ್ಠಿಯ ವೇಳೆ ಪುರುಷ ಪತ್ರಕರ್ತರು ಮಾತ್ರ ಸೇರಿದ್ದರು.
ಇದು 2021 ರಲ್ಲಿ ಅಮೆರಿಕ ತನ್ನ ನೇತೃತ್ವದ ಪಡೆಗಳನ್ನು ಹಿಂತೆಗೆದುಕೊಂಡ ಬೆನ್ನಲ್ಲೆ ಅಧಿಕಾರಕ್ಕೆ ಮರಳಿದ ನಂತರ ಉನ್ನತ ತಾಲಿಬಾನ್ ನಾಯಕರೊಬ್ಬರು ಭಾರತಕ್ಕೆ ನೀಡಿದ ಮೊದಲ ಭೇಟಿಯಾಗಿದೆ.
ತಾಲಿಬಾನ್ ನಿಯಮಾವಳಿಗಳಂತೆ, ಅಫ್ಘಾನಿಸ್ತಾನದಲ್ಲಿ ಹೆಣ್ಣುಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗಗಳಿಗೆ ನಿರ್ಬಂಧಗಳನ್ನು ವಿಧಿಸಲಾಗಿದೆ. ಇದೀಗ ಭಾರತಕ್ಕೆ ಬಂದು ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಪತ್ರಕರ್ತರಿಗೆ ಅವಕಾಶ ನಿರಾಕರಣೆ ಮಾಡಿದ್ದೂ ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.