January15, 2026
Thursday, January 15, 2026
spot_img

ಟೀಮ್ ಇಂಡಿಯಾ ಮುಂದಿದೆ ದೊಡ್ಡ ಸವಾಲು: ತಪ್ಪುಗಳನ್ನು ಸರಿ ಮಾಡಿಕೊಳ್ಳದಿದ್ರೆ ಸೋಲು ಕಟ್ಟಿಟ್ಟ ಬುತ್ತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಧರ್ಮಶಾಲಾ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ20 ಸರಣಿ ಇದೀಗ ತೀವ್ರ ಕುತೂಹಲದ ಹಂತ ತಲುಪಿದೆ. ಮೊದಲ ಎರಡು ಪಂದ್ಯಗಳಲ್ಲಿ ಉಭಯ ತಂಡಗಳು ತಲಾ ಒಂದೊಂದು ಜಯ ದಾಖಲಿಸಿರುವುದರಿಂದ, ಇಂದು ನಡೆಯಲಿರುವ ಮೂರನೇ ಪಂದ್ಯ ಸರಣಿಯನ್ನು ನಿರ್ಧರಿಸುವ ನಿರ್ಣಾಯಕ ಮುಖಾಮುಖಿಯಾಗಿ ಪರಿಣಮಿಸಿದೆ. ಭರ್ಜರಿ ಗೆಲುವಿನಿಂದ ಆರಂಭಿಸಿದ್ದ ಟೀಮ್ ಇಂಡಿಯಾ, ಎರಡನೇ ಪಂದ್ಯದಲ್ಲಿ ನಿರೀಕ್ಷೆಗೂ ಮೀರಿದ ಸೋಲು ಕಂಡಿದ್ದು, ಇದೀಗ ಆತ್ಮಾವಲೋಕನದ ಅಗತ್ಯ ಎದುರಾಗಿದೆ.

ಎರಡನೇ ಟಿ20ನಲ್ಲಿ ಭಾರತದ ಬ್ಯಾಟಿಂಗ್ ವಿಭಾಗ ಗೊಂದಲದ ತೀರ್ಮಾನಗಳಿಂದ ಸಂಕಷ್ಟಕ್ಕೆ ಸಿಲುಕಿತು. ಆರಂಭಿಕರಾದ ಶುಭ್‌ಮನ್ ಗಿಲ್ ಸತತ ವೈಫಲ್ಯ ಅನುಭವಿಸಿದ್ದು, ತಂಡದ ಸಂಯೋಜನೆಯಲ್ಲಿ ಬದಲಾವಣೆ ಅನಿವಾರ್ಯ ಎಂಬ ಚರ್ಚೆಗೆ ಕಾರಣವಾಗಿದೆ. ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚಾಗಿದೆ. ಅದೇ ರೀತಿ ಬ್ಯಾಟಿಂಗ್ ಕ್ರಮಾಂಕದ ಪ್ರಯೋಗವೂ ಹಿನ್ನಡೆಯಾಗಿ ಪರಿಣಮಿಸಿತು. ದೊಡ್ಡ ಗುರಿ ಬೆನ್ನಟ್ಟುವ ಸಂದರ್ಭದಲ್ಲಿ ಅಕ್ಷರ್ ಪಟೇಲ್ ಅವರನ್ನು ಮೇಲಿನ ಕ್ರಮಾಂಕದಲ್ಲಿ ಕಳುಹಿಸಿದ ನಿರ್ಧಾರ ಫಲ ನೀಡಲಿಲ್ಲ, ಪರಿಣಾಮ ತಂಡದ ರನ್ ವೇಗ ಕುಸಿಯಿತು.

ಬೌಲಿಂಗ್ ವಿಭಾಗದಲ್ಲೂ ಟೀಮ್ ಇಂಡಿಯಾ ನಿರಾಶೆ ಮೂಡಿಸಿತು. ವಿಶ್ವಾಸಾರ್ಹರೆಂದು ಪರಿಗಣಿಸಲ್ಪಡುವ ಜಸ್ಪ್ರೀತ್ ಬುಮ್ರಾ ಮತ್ತು ಅರ್ಶ್ದೀಪ್ ಸಿಂಗ್ ದುಬಾರಿ ಓವರ್‌ಗಳನ್ನು ನೀಡಿದ್ದು, ವಿಕೆಟ್ ಪಡೆಯಲು ವಿಫಲರಾದರು. ಇದರಿಂದ ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್‌ಗಳು ಮುಕ್ತವಾಗಿ ರನ್ ಗಳಿಸಿದರು. ಸರಣಿಯಲ್ಲಿ ಮುನ್ನಡೆ ಸಾಧಿಸಬೇಕಾದರೆ, ಇಂದಿನ ಪಂದ್ಯದಲ್ಲಿ ಭಾರತ ಈ ಎಲ್ಲಾ ತಪ್ಪುಗಳನ್ನು ಸರಿಪಡಿಸಿ ಹೊಸ ತಂತ್ರದೊಂದಿಗೆ ಕಣಕ್ಕಿಳಿಯಬೇಕಾದ ಅನಿವಾರ್ಯತೆ ಎದುರಾಗಿದೆ.

Most Read

error: Content is protected !!