January15, 2026
Thursday, January 15, 2026
spot_img

ವಿಶ್ವಕಪ್‌ಗೂ ಮುನ್ನ ಟೀಮ್ ಇಂಡಿಯಾಗೆ ‘ಗಾಯ’ದ ಬರೆ: ಇಬ್ಬರು ಸ್ಟಾರ್ ಆಟಗಾರರು ಟೂರ್ನಿಯಿಂದ ಔಟ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫೆಬ್ರವರಿ 7 ರಿಂದ ಆರಂಭವಾಗಲಿರುವ ಬಹುನಿರೀಕ್ಷಿತ ಟಿ20 ವಿಶ್ವಕಪ್‌ಗೆ ಭಾರತ ಮತ್ತು ಶ್ರೀಲಂಕಾ ಸಜ್ಜಾಗುತ್ತಿವೆ. ಆದರೆ, ಟೂರ್ನಿ ಆರಂಭಕ್ಕೂ ಮುನ್ನವೇ ಭಾರತ ತಂಡಕ್ಕೆ ಗಾಯದ ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ತಂಡದ ಪ್ರಮುಖ ಆಟಗಾರರಾದ ತಿಲಕ್ ವರ್ಮಾ ಮತ್ತು ವಾಷಿಂಗ್ಟನ್ ಸುಂದರ್ ಗಾಯದ ಕಾರಣದಿಂದಾಗಿ ವಿಶ್ವಕಪ್‌ನಿಂದ ಹೊರಗುಳಿಯುವ ಸಾಧ್ಯತೆ ದಟ್ಟವಾಗಿದೆ.

ವಿಜಯ ಹಝಾರೆ ಟೂರ್ನಿಯ ವೇಳೆ ತೊಡೆಸಂಧು ನೋವಿಗೆ ತುತ್ತಾಗಿದ್ದ ಎಡಗೈ ಬ್ಯಾಟರ್ ತಿಲಕ್ ವರ್ಮಾ, ಇದೀಗ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಅವರು, ಮುಂಬರುವ ನ್ಯೂಝಿಲೆಂಡ್ ವಿರುದ್ಧದ ಸರಣಿಯಿಂದ ಅಧಿಕೃತವಾಗಿ ಹೊರಬಿದ್ದಿದ್ದಾರೆ. ಸರ್ಜರಿಯ ನಂತರ ಗುಣಮುಖರಾಗಲು ಹೆಚ್ಚಿನ ಸಮಯ ಬೇಕಿರುವುದರಿಂದ, ವಿಶ್ವಕಪ್ ಆರಂಭದ ವೇಳೆಗೆ ಅವರು ಫಿಟ್ ಆಗುವುದು ಅನುಮಾನ ಎನ್ನಲಾಗುತ್ತಿದೆ.

ಮತ್ತೊಂದೆಡೆ, ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ನ್ಯೂಝಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದ ವೇಳೆ ಪೆಕ್ಕೆಲುಬಿನ ಗಾಯಕ್ಕೆ ಒಳಗಾಗಿದ್ದಾರೆ. ಈ ಗಾಯದ ತೀವ್ರತೆಯಿಂದಾಗಿ ಅವರು ಕಿವೀಸ್ ವಿರುದ್ಧದ ಉಳಿದ ಪಂದ್ಯಗಳಿಂದ ವಂಚಿತರಾಗಿದ್ದಾರೆ. ವಿಶ್ವಕಪ್‌ಗೆ ಕೆಲವೇ ದಿನಗಳು ಬಾಕಿ ಇರುವುದರಿಂದ, ಸುಂದರ್ ಅವರ ಲಭ್ಯತೆಯೂ ಈಗ ಪ್ರಶ್ನಾರ್ಥಕ ಚಿಹ್ನೆಯಾಗಿದೆ.

ನ್ಯೂಝಿಲೆಂಡ್ ವಿರುದ್ಧದ ಟಿ20 ಸರಣಿಯ ಬೆನ್ನಲ್ಲೇ ವಿಶ್ವಕಪ್ ಆರಂಭವಾಗಲಿದೆ. ಈ ಇಬ್ಬರು ಆಟಗಾರರು ಲಭ್ಯವಿಲ್ಲದಿದ್ದರೆ, ಆಯ್ಕೆ ಸಮಿತಿಯು ಶೀಘ್ರದಲ್ಲೇ ಬದಲಿ ಆಟಗಾರರನ್ನು ಘೋಷಿಸುವ ಸಾಧ್ಯತೆಯಿದೆ. ಸೂರ್ಯಕುಮಾರ್ ಯಾದವ್ ನೇತೃತ್ವದ ಬಲಿಷ್ಠ ತಂಡದಲ್ಲಿ ಈ ಇಬ್ಬರು ಪ್ರತಿಭಾವಂತ ಆಟಗಾರರ ಅನುಪಸ್ಥಿತಿ ತಂಡದ ಸಮತೋಲನದ ಮೇಲೆ ಪರಿಣಾಮ ಬೀರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಸದ್ಯ ಘೋಷಿತವಾಗಿರುವ ಟಿ20 ವಿಶ್ವಕಪ್ ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (WK), ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ಕುಲ್ದೀಪ್ ಯಾದವ್, ಇಶಾನ್ ಕಿಶನ್ (WK), ರಿಂಕು ಸಿಂಗ್, ತಿಲಕ್ ವರ್ಮಾ (ಗಾಯಾಳು), ವಾಷಿಂಗ್ಟನ್ ಸುಂದರ್ (ಗಾಯಾಳು).

Most Read

error: Content is protected !!