Saturday, September 27, 2025

ಪ್ರಾಯೋಜಕರಿಲ್ಲದೆ ಏಷ್ಯಾಕಪ್‌ನಲ್ಲಿ ಕಣಕ್ಕಿಳಿಯಲಿರುವ ಟೀಮ್ ಇಂಡಿಯಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಕ್ರಿಕೆಟ್ ತಂಡ ಯಾವಾಗಲೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪ್ರಭಾವ ಬೀರಿರುವ ತಂಡ. ಆದರೆ ಮುಂಬರುವ ಏಷ್ಯಾಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಪ್ರಮುಖ ಬದಲಾವಣೆಯೊಂದಿಗೆ ಮೈದಾನಕ್ಕಿಳಿಯಲಿದೆ. ಈ ಬಾರಿ ಆಟಗಾರರ ಜೆರ್ಸಿಗಳ ಮೇಲೆ ಯಾವುದೇ ಕಂಪನಿಯ ಪ್ರಾಯೋಜಕತ್ವದ ಹೆಸರು ಇರದೇ ಕೇವಲ “INDIA” ಎಂಬ ಬರಹ ಮಾತ್ರ ಕಾಣಿಸಿಕೊಳ್ಳಲಿದೆ. ಇದು ಅಭಿಮಾನಿಗಳಿಗೆ ಹೊಸ ಅನುಭವವನ್ನು ನೀಡಲಿದ್ದು, ಅದರ ಹಿಂದೆ ಕಾರಣವಿದೆ.

2023ರಲ್ಲಿ ಬಿಸಿಸಿಐ ಹಾಗೂ ಡ್ರೀಮ್ 11 ನಡುವೆ 44 ಮಿಲಿಯನ್ ಯುಎಸ್ ಡಾಲರ್ (ಸುಮಾರು ರೂ. 358 ಕೋಟಿ) ಮೌಲ್ಯದ ಒಪ್ಪಂದವಾಗಿತ್ತು. ಇದರ ಪ್ರಕಾರ 2026ರವರೆಗೆ ಡ್ರೀಮ್ 11 ಜೆರ್ಸಿ ಮೇಲಿನ ಪ್ರಾಯೋಜಕತ್ವ ಹೊಂದಿತ್ತು. ಆದರೆ ಭಾರತ ಸರ್ಕಾರವು ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ ಅಂಗೀಕರಿಸಿದ ಬಳಿಕ, ಬಿಸಿಸಿಐ ಡ್ರೀಮ್ 11 ಜೊತೆಗಿನ ಒಪ್ಪಂದವನ್ನು ರದ್ದುಪಡಿಸಿದೆ.

ಹೊಸ ಪ್ರಾಯೋಜಕರಿಗಾಗಿ ಬಿಸಿಸಿಐ ಸೆಪ್ಟೆಂಬರ್ 2ರಂದು ಟೆಂಡರ್ ಆಹ್ವಾನಿಸಿದೆ. ಆಸಕ್ತ ಕಂಪನಿಗಳು ಸೆಪ್ಟೆಂಬರ್ 12ರವರೆಗೆ ಅರ್ಜಿ ಸಲ್ಲಿಸಬಹುದು ಮತ್ತು ಸೆಪ್ಟೆಂಬರ್ 16ರಂದು ಬಿಡ್ಡಿಂಗ್ ನಡೆಯಲಿದೆ. ಆದರೆ ಏಷ್ಯಾಕಪ್ ಸೆಪ್ಟೆಂಬರ್ 9ರಿಂದ ಪ್ರಾರಂಭವಾಗುತ್ತಿರುವುದರಿಂದ ಮೊದಲ ಎರಡು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಪ್ರಾಯೋಜಕತ್ವವಿಲ್ಲದ ಜೆರ್ಸಿಯಲ್ಲಿ ಆಡಬೇಕಾಗುತ್ತದೆ.

ಜೆರ್ಸಿಯಲ್ಲಿ ಕೇವಲ “INDIA”:
ಸಾಮಾನ್ಯವಾಗಿ ಆಟಗಾರರ ಜೆರ್ಸಿಯಲ್ಲಿ ಪ್ರಾಯೋಜಕರ ಹೆಸರು ಪ್ರಮುಖವಾಗಿ ಮುದ್ರಣವಾಗಿರುತ್ತದೆ. ಆದರೆ ಈ ಬಾರಿ ಟೀಮ್ ಇಂಡಿಯಾ ಮೈದಾನಕ್ಕಿಳಿಯುವ ಜೆರ್ಸಿಯಲ್ಲಿ ಕೇವಲ “INDIA” ಎಂಬ ಬರಹವೇ ರಾರಾಜಿಸಲಿದೆ. ಇದು ಅಭಿಮಾನಿಗಳಿಗೆ ರಾಷ್ಟ್ರಪ್ರತಿಷ್ಠೆಯ ಭಾವನೆ ನೀಡುವಂತದ್ದಾಗಿದೆ.

ಪ್ರಾಯೋಜಕತ್ವಕ್ಕೆ ಕಟ್ಟುನಿಟ್ಟಿನ ನಿಯಮಗಳು:
ಹೊಸ ಪ್ರಾಯೋಜಕರು ಬಿಸಿಸಿಐ ನಿಯಮಗಳನ್ನು ಪಾಲಿಸಬೇಕಿದೆ. ಜೂಜಾಟ, ಆನ್‌ಲೈನ್ ಹಣದ ಗೇಮಿಂಗ್, ಕ್ರಿಪ್ಟೋಕರೆನ್ಸಿ, ತಂಬಾಕು, ಮದ್ಯ ಮತ್ತು ಅಶ್ಲೀಲತೆಯೊಂದಿಗೆ ಸಂಬಂಧಪಟ್ಟ ಕಂಪನಿಗಳನ್ನು ಟೆಂಡರ್ ಪ್ರಕ್ರಿಯೆಯಿಂದ ಹೊರಗಿಟ್ಟಿದೆ. ಇದು ತಂಡದ ಗೌರವ ಹಾಗೂ ಸಮಾಜದ ನೈತಿಕತೆಯನ್ನು ಕಾಪಾಡಲು ತೆಗೆದುಕೊಂಡ ಕ್ರಮವಾಗಿದೆ.

ಏಷ್ಯಾಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಜೆರ್ಸಿಯಲ್ಲಿ ಪ್ರಾಯೋಜಕರ ಹೆಸರು ಕಾಣಿಸದಿರುವುದು ಅಭಿಮಾನಿಗಳಿಗೆ ವಿಭಿನ್ನ ಅನುಭವವಾಗಲಿದೆ. ಆದರೆ ಬಿಸಿಸಿಐ ನಿಯಮಾನುಸಾರ ಹೊಸ ಪ್ರಾಯೋಜಕರು ಶೀಘ್ರದಲ್ಲೇ ಆಯ್ಕೆಯಾಗಲಿದ್ದಾರೆ. ಆವರೆಗೆ ಟೀಮ್ ಇಂಡಿಯಾ “INDIA” ಎಂಬ ಬರಹದ ಜೆರ್ಸಿಯಲ್ಲೇ ಮೈದಾನಕ್ಕಿಳಿಯುವುದು ಖಚಿತ. ಇದು ರಾಷ್ಟ್ರಭಾವನೆಯನ್ನು ಮತ್ತಷ್ಟು ಒತ್ತಿ ಹೇಳುವಂತಾಗಿದೆ.