ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ದೇಶದಾದ್ಯಂತ ಜೋರಾಗಿ ನಡೆಯುತ್ತಿದ್ದರೂ, ಆದರೆ ಈ ನಡುವೆ ಪಟಾಕಿ ಸಿಡಿದು ಹಲವಾರು ಗಾಯಗೊಂಡಿರುವ ಘಟನೆ ಹಬ್ಬದ ಮೊದಲ ದಿನವೇ ನಡೆದಿದೆ. ಬೆಂಗಳೂರಿನಲ್ಲಿ ಐದು ಮಕ್ಕಳಿಗೆ ಪಟಾಕಿಯಿಂದ ಕಣ್ಣಿಗೆ ಗಾಯವಾದ ಪ್ರಕರಣಗಳು ದಾಖಲಾಗಿವೆ. ಅದೃಷ್ಟವಶಾತ್, ಯಾವುದೇ ಪ್ರಾಣಾಪಾಯ ಸಂಭವಿಸದಿದ್ದರೂ, ಈ ಘಟನೆಗಳು ಪೋಷಕರಲ್ಲಿ ಆತಂಕ ಮೂಡಿಸಿದೆ.
ಬೆಂಗಳೂರಿನ ಎರಡು ಖಾಸಗಿ ಕಣ್ಣಿನ ಆಸ್ಪತ್ರೆಯಲ್ಲಿ ಐವರು ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದ್ದು, ಎಲ್ಲರೂ 15 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಒಂದು ಆಸ್ಪತ್ರೆಯಲ್ಲಿ 12 ಮತ್ತು 14 ವರ್ಷದ ಇಬ್ಬರು ಮಕ್ಕಳು ಚಿಕಿತ್ಸೆ ಪಡೆದರೆ, ಮತ್ತೊಂದು ಆಸ್ಪತ್ರೆಯಲ್ಲಿ 3, 4 ಮತ್ತು 14 ವರ್ಷದ ಮಕ್ಕಳಿಗೆ ಕಣ್ಣಿಗೆ ಕಿಡಿ ಬಿದ್ದಿದೆ. ಇವರಲ್ಲಿ ಇಬ್ಬರು ಪಟಾಕಿ ಹಚ್ಚುವಾಗಲೇ ಗಾಯಗೊಂಡರೆ, ಇನ್ನುಳಿದ ಮೂವರು ನೋಡುವ ವೇಳೆ ಕಿಡಿ ತಗುಲಿದ ಪ್ರಕರಣಗಳಾಗಿವೆ.
ಪಟಾಕಿ ಹೊಡೆಯುವಾಗ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ಕಣ್ಣಿಗೆ ಕಿಡಿ ಹಾರಿದರೆ ತಕ್ಷಣ ನೀರಿನಿಂದ ತೊಳೆಯಬೇಕು, ಉಜ್ಜಬಾರದು ಮತ್ತು ವೈದ್ಯರ ಸಹಾಯ ಪಡೆಯಬೇಕು. ಕೇವಲ ಕ್ಷಣಿಕ ಖುಷಿಗೋಸ್ಕರ ಜೀವಮಾನಪೂರ್ತಿ ಕಣ್ಣು ಕಳೆದುಕೊಳ್ಳುವ ಪರಿಸ್ಥಿತಿ ಬರಬಾರದು ಎಂಬ ಸಂದೇಶವನ್ನು ವೈದ್ಯರು ನೀಡಿದ್ದಾರೆ.