ಹೊಸದಿಗಂತ ಡಿಜಿಟಲ್ ಡೆಸ್ಕ್:
ಟ್ರಾಫಿಕ್ ದಂಡ ಪಾವತಿಸುವ ನೆಪದಲ್ಲಿ ಸೈಬರ್ ವಂಚಕರು ಟೆಕ್ಕಿಯೊಬ್ಬರಿಂದ 2.32 ಲಕ್ಷ ರೂ. ವಂಚಿಸಿರುವ ಘಟನೆ ಬೆಂಗಳೂರು ಪೂರ್ವ ವಿಭಾಗದಲ್ಲಿ ವರದಿಯಾಗಿದೆ. ನಕಲಿ ಟ್ರಾಫಿಕ್ ಚಲನ್ ಲಿಂಕ್ ಮೂಲಕ ಕ್ರೆಡಿಟ್ ಕಾರ್ಡ್ ವಿವರಗಳನ್ನು ಪಡೆದು ಹಣ ಕಳವು ಮಾಡಲಾಗಿದೆ.
ವೈಟ್‌ಫೀಲ್ಡ್‌ನಲ್ಲಿ ವಾಸಿಸುವ 57 ವರ್ಷದ ಟೆಕ್ಕಿಗೆ ಜನವರಿ 26ರಂದು “500 ರೂ. ಟ್ರಾಫಿಕ್ ಚಲನ್ ಬಾಕಿ ಇದೆ” ಎಂಬ ಟೆಕ್ಸ್ಟ್ ಮೆಸೇಜ್ ಬಂದಿದೆ. ಅದರಲ್ಲಿದ್ದ ಲಿಂಕ್ ಕ್ಲಿಕ್ ಮಾಡಿದಾಗ, ದಂಡ ಪಾವತಿಗೆ ಸಂಬಂಧಿಸಿದಂತೆ ಕಾಣುವ ವೆಬ್‌ಸೈಟ್ ತೆರೆಯಿತು. ನಂಬಿಕೆ ಇಟ್ಟು ಅವರು ತಮ್ಮ ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ನಮೂದಿಸಿದ ಕ್ಷಣದಲ್ಲೇ ಖಾತೆಯಿಂದ 2,32,272 ರೂ. ಡೆಬಿಟ್ ಆಗಿದೆ.
ಮೋಸದ ಅರಿವಾದ ತಕ್ಷಣ ಸಂತ್ರಸ್ತರು ವೈಟ್‌ಫೀಲ್ಡ್ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದೇ ವೇಳೆ, ಚಲನ್ ಪಾವತಿಗಾಗಿ ಇಂತಹ ಲಿಂಕ್‌ಗಳನ್ನು ಕಳುಹಿಸುವುದಿಲ್ಲ ಎಂದು ಬೆಂಗಳೂರು ಸಂಚಾರ ಪೊಲೀಸರು ಸ್ಪಷ್ಟಪಡಿಸಿದ್ದಾರೆ.



