ಹೊಸದಿಗಂತ ಡಿಜಿಟಲ್ ಡೆಸ್ಕ್:
ದುಬೈ ಏರ್‌ಶೋ ವೇಳೆ ತೇಜಸ್ ಯುದ್ಧವಿಮಾನ ಪತನಗೊಂಡ ದುರಂತದಲ್ಲಿ ಹುತಾತ್ಮರಾದ ವಿಂಗ್ ಕಮಾಂಡರ್ ನಮಾಂಶ್ ಸಯಾಲ್ ಅವರ ಪಾರ್ಥಿವ ಶರೀರ ಇಂದು ಬೆಳಗ್ಗೆ ಕೊಯಮತ್ತೂರು ಸುಲೂರು ವಾಯುನೆಲೆಗೆ ತಲುಪಿದ್ದು, ಸೈನ್ಯ ಹಾಗೂ ಅಧಿಕಾರಿಗಳಿಂದ ಗೌರವಪೂರ್ಣ ಅಂತಿಮ ನಮನ ಸಲ್ಲಿಸಲಾಯಿತು.
ಭಾರತೀಯ ವಾಯುಪಡೆ ವಿಶೇಷ ವಿಮಾನದಲ್ಲಿ ಸಯಾಲ್ ಅವರ ಮೃತದೇಹವನ್ನು ಭಾರತಕ್ಕೆ ತರಿಸಲಾಗಿದ್ದು, ಅದಕ್ಕೂ ಮೊದಲು ಯುಎಇ ರಕ್ಷಣಾ ಪಡೆಗಳು ಅಧಿಕೃತ ಗೌರವ ಸಲ್ಲಿಸಿ ಅವರ ಸಾಹಸ, ಶೌರ್ಯವನ್ನು ಶ್ಲಾಘಿಸಿವೆ. ಯುಎಇಯ ಭಾರತೀಯ ರಾಯಭಾರಿ ದೀಪಕ್ ಮಿತ್ತಲ್ ಹಾಗೂ ಕಾನ್ಸುಲೇಟ್ ಜನರಲ್ ಸತೀಶ್ ಶಿವನ್ ಸಹ ಅಂತಿಮ ಗೌರವ ಸಲ್ಲಿಸಿದ ಮಾಹಿತಿ ಭಾರತೀಯ ರಾಯಭಾರಿ ಕಚೇರಿಯ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಲಾಗಿದೆ.
ನಮಾಂಶ್ ಸಯಾಲ್ ಅವರ ಹುಟ್ಟೂರಿನಲ್ಲಿ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕುಟುಂಬಸ್ಥರಾದ ಪತ್ನಿ, 6 ವರ್ಷದ ಮಗಳು ಹಾಗೂ ಪೋಷಕರು ಹಿಮಾಚಲಪ್ರದೇಶದ ಕಾಂಗ್ರಾ ಜಿಲ್ಲೆಯ ನಾಗ್ರೋಟಾ ಬಾಗ್ವಾನ್‌ನಿಂದ ಸುಲೂರಿಗೆ ಆಗಮಿಸಿದ್ದಾರೆ. “ಸಯಾಲ್ ನಮ್ಮ ಊರಿನ ಹೆಮ್ಮೆ. ಅವರ ಅಂತಿಮ ನಮನಕ್ಕೆ ನಾವು ಎಲ್ಲರೂ ಕಾಯುತ್ತಿದ್ದೇವೆ,” ಎಂದು ಗ್ರಾಮಸ್ಥರು ಭಾವುಕರಾಗಿದ್ದಾರೆ.

