ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ಸರಕಾರ ದ್ವೇಷ ಭಾಷಣದ ವಿರುದ್ಧ ಕಠಿಣ ಕಾನೂನು ರೂಪಿಸಲು ಮುಂದಾಗಿದ್ದು, ಇದರ ಬೆನ್ನಲ್ಲೇ ತೆಲಂಗಾಣ ಸರ್ಕಾರವು ಕೂಡ ಶೀಘ್ರದಲ್ಲೇ ಜಾರಿಗೆ ತರಲು ನಿರ್ಧರಿಸಿದೆ.
ಈ ಕುರಿತು ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಮಾಹಿತಿ ನೀಡಿದ್ದು, ನೆರೆಯ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಇತರ ಧರ್ಮಗಳ ವಿರುದ್ಧ ದ್ವೇಷ ಭಾಷಣ ಮಾಡಿದ ವ್ಯಕ್ತಿಗಳನ್ನು ಶಿಕ್ಷಿಸಲು ಮಸೂದೆ ತಂದಿದೆ. ಅದೇ ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ಕಾನೂನನ್ನು ಶೀಘ್ರದಲ್ಲೇ ತರಲಿದ್ದೇವೆ ಎಂದು ಹೇಳಿದರು.
ಮುಂಬರುವ ಬಜೆಟ್ ಅಧಿವೇಶನದಲ್ಲಿ ಮಂಡಿಸುವ ಮೂಲಕ ಅಂಗೀಕಾರ ಪಡೆಯಲಿದ್ದೇವೆ. ಒಂದು ಧರ್ಮ ಅನುಸರಿಸುವ ಸ್ವಾತಂತ್ರ್ಯ ಮತ್ತು ಪ್ರತಿಯೊಂದು ಧರ್ಮಕ್ಕೂ ಸಮಾನ ಹಕ್ಕುಗಳನ್ನು ಈ ಮೂಲಕ ಖಚಿತಪಡಿಸಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಕ್ರಿಶ್ಚಿಯನ್ನರು, ಮುಸ್ಲಿಮರು ಮತ್ತು ಯಾವುದೇ ಇತರ ಅಲ್ಪಸಂಖ್ಯಾತರು ಅಭಿವೃದ್ಧಿ ಹೊಂದಲು ಬಯಸುವುದು, ಅದು ಯಾರೋ ತೋರುವ ದಯೆಯಲ್ಲ. ಬದಲಿಗೆ ಅದು ಅವರ ಹಕ್ಕು ಎಂದು ಸಿಎಂ ರೆಡ್ಡಿ ಹೇಳಿದರು.
ನಿಮ್ಮ (ಅಲ್ಪಸಂಖ್ಯಾತರು) ಹಕ್ಕುಗಳನ್ನು ರಕ್ಷಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ನಿಮ್ಮ ಹಕ್ಕುಗಳಿಗೆ ಎಲ್ಲಿಯಾದರೂ ಹಾನಿಯಾಗಿದ್ದರೆ, ನಾವು ಅದನ್ನು ಸರಿಪಡಿಸಲು ಸಿದ್ಧವಿದ್ದೇವೆ. ಕ್ರಿಶ್ಚಿಯನ್ನರು ಎದುರಿಸುತ್ತಿರುವ ಸ್ಮಶಾನ ಜಾಗದ ಕೊರತೆಯ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಕರ್ನಾಟಕದ ಮಸೂದೆ ಹೇಗಿದೆ?: ಜನಾಂಗೀಯ ನಿಂದನೆ, ಭಾಷೆ, ಜನ್ಮಸ್ಥಳ, ಜಾತಿ, ಧರ್ಮ ಆಧರಿಸಿ ದ್ವೇಷದ ಕೃತ್ಯ ಮತ್ತು ದ್ವೇಷ ಭಾಷಣ ಮಾಡುವುದನ್ನು ಪ್ರತಿಬಂಧಿಸಲು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಇತ್ತೀಚೆಗೆ ಮುಗಿದ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಿ ಅಂಗೀಕಾರ ಪಡೆದುಕೊಂಡಿದೆ.


