ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಚಳಿಗಾಲದ ಅತ್ಯಂತ ತೀವ್ರ ಚಳಿ ಶನಿವಾರ ಅನುಭವಕ್ಕೆ ಬಂದಿದೆ. ನಗರದಲ್ಲಿ ಕನಿಷ್ಠ ತಾಪಮಾನ 4.2 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದ್ದು, ಇದು ಋತುವಿನ ಸರಾಸರಿಗಿಂತ ಸುಮಾರು 2.7 ಡಿಗ್ರಿ ಕಡಿಮೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಮಟ್ಟದ ತಾಪಮಾನ ಇತ್ತೀಚಿನ ದಿನಗಳಲ್ಲಿ ಕಂಡುಬಂದ ಅತ್ಯಂತ ಕಡಿಮೆ ಉಷ್ಣಾಂಶವೆಂದು ಹೇಳಲಾಗಿದೆ.
ಹವಾಮಾನ ವರದಿಗಳ ಪ್ರಕಾರ, 2024ರ ಜನವರಿ 15ರಂದು ದೆಹಲಿಯಲ್ಲಿ 3.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿತ್ತು. ಅದರ ಬಳಿಕ ಇದೇ ಅತಿ ಕಡಿಮೆ ಮಟ್ಟದ್ದಾಗಿದೆ. ಶನಿವಾರ ಸಫ್ದರ್ಜಂಗ್ ಪ್ರದೇಶದಲ್ಲಿ 4.2 ಡಿಗ್ರಿ, ಪಾಲಂನಲ್ಲಿ 4.5 ಡಿಗ್ರಿ, ಲೋಧಿ ರಸ್ತೆ ಪ್ರದೇಶದಲ್ಲಿ 4.7 ಡಿಗ್ರಿ, ರಿಡ್ಜ್‌ನಲ್ಲಿ 5.3 ಡಿಗ್ರಿ ಹಾಗೂ ಅಯನಗರದಲ್ಲಿ 4.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ಇದನ್ನೂ ಓದಿ: FOOD| ದೋಸೆ, ಇಡ್ಲಿ ಜೊತೆ ಒಮ್ಮೆ ಈ ಮಶ್ರೂಮ್ ಚಟ್ನಿ ಟ್ರೈ ಮಾಡಿ!
ಇದಕ್ಕೂ ಒಂದು ದಿನ ಮೊದಲು ದೆಹಲಿಯಲ್ಲಿ 4.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿತ್ತು. ಡಿಸೆಂಬರ್ ಆರಂಭದಲ್ಲಿಯೂ ತಾಪಮಾನ ಕ್ರಮೇಣ ಇಳಿಮುಖವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತೀವ್ರ ಚಳಿಯೊಂದಿಗೆ ದಟ್ಟ ಮಂಜು ಆವರಿಸಿದ್ದು, ಗೋಚರತೆ ತೀವ್ರವಾಗಿ ಕುಸಿದಿದೆ. ಇದರ ಪರಿಣಾಮವಾಗಿ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಲವು ವಿಮಾನಗಳ ಆಗಮನ ಹಾಗೂ ನಿರ್ಗಮನದಲ್ಲಿ ವ್ಯತ್ಯಯ ಉಂಟಾಗಿದೆ.

