February 6, 2026
Friday, February 6, 2026
spot_img

ಸಿಎಂ-ಡಿಸಿಎಂ ಶೀತಲ ಸಮರಕ್ಕೆ ತಾತ್ಕಾಲಿಕ ಬ್ರೇಕ್: ಕಿತ್ತಾಟಕ್ಕೆ ಮದ್ದರೆಯಲು ದಿಲ್ಲಿಯಿಂದ ‘ಪವರ್ ಡೋಸ್’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ಪಾಳೆಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಮುಂದುವರಿದ ‘ಕುರ್ಚಿ ಕಿತ್ತಾಟ’ಕ್ಕೆ ಸದ್ಯಕ್ಕೆ ತಾತ್ಕಾಲಿಕ ವಿರಾಮ ಬಿದ್ದಿದೆ. ಆದರೆ, ವಿಧಾನಸಭಾ ಅಧಿವೇಶನ ಮುಕ್ತಾಯದ ನಂತರ ಈ ಅಧಿಕಾರದ ಕಿಚ್ಚು ಮತ್ತೆ ಭುಗಿಲೇಳುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ, ಬೀಸುವ ದೊಣ್ಣೆಯಿಂದ ತಾತ್ಕಾಲಿಕವಾಗಿ ಪಾರಾಗಿರುವ ಎಐಸಿಸಿ ನಾಯಕರು, ಭಿನ್ನಮತ ಶಮನಕ್ಕೆ ಗಂಭೀರ ‘ಪ್ಲಾನ್’ ರೂಪಿಸುತ್ತಿದ್ದಾರೆ.

ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಇದೇ ವಾರದಲ್ಲಿ ದೆಹಲಿಗೆ ಕರೆಸಿ ಪ್ರತ್ಯೇಕವಾಗಿ ಅಥವಾ ಜಂಟಿಯಾಗಿ ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಪಕ್ಷದೊಳಗಿನ ಬಿಕ್ಕಟ್ಟಿಗೆ ಮದ್ದು ಅರೆಯುವ ಹೈಕಮಾಂಡ್‌ನ ಅಂತಿಮ ತೀರ್ಮಾನವು ಇಂದು ಸಂಜೆ 5 ಗಂಟೆಗೆ ನಡೆಯುವ ಮಹತ್ವದ ಸಭೆಯ ನಂತರ ಹೊರಬೀಳಲಿದೆ.

ಇಂದು ಸಂಜೆ ಸೋನಿಯಾ ನಿವಾಸದಲ್ಲಿ ಮಹತ್ವದ ಸಭೆ

ಕಾಂಗ್ರೆಸ್ ಸಂಸದೀಯ ಸಭೆಯು ಇಂದು ಸಂಜೆ 5 ಗಂಟೆಗೆ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ನಡೆಯಲಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಈ ಸಭೆಯಲ್ಲಿ, ರಾಜ್ಯದಲ್ಲಿನ ಇತ್ತೀಚಿನ ರಾಜಕೀಯ ವಿದ್ಯಮಾನಗಳು ಮತ್ತು ಸಿಎಂ-ಡಿಸಿಎಂ ನಡುವಿನ ಭಿನ್ನಾಭಿಪ್ರಾಯಗಳ ಕುರಿತು ವಿಸ್ತೃತ ಚರ್ಚೆ ನಡೆಯುವ ನಿರೀಕ್ಷೆಯಿದೆ. ಈ ಚರ್ಚೆಯ ನಂತರವೇ ಕರ್ನಾಟಕದ ನಾಯಕರ ಭೇಟಿ ದಿನಾಂಕ ನಿಗದಿಯಾಗಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !