ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದಂತೆ ನಡೆಯುತ್ತಿದ್ದ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವಿನ ಮುಸುಕಿನ ಗುದ್ದಾಟಕ್ಕೆ ತಾತ್ಕಾಲಿಕವಾಗಿ ತೆರೆ ಬಿದ್ದಿದೆ. ಕಳೆದ ಒಂದು ತಿಂಗಳಿನಿಂದ ಭುಗಿಲೆದ್ದಿದ್ದ ನಾಯಕತ್ವ ಬದಲಾವಣೆ ಸಮರವು ನಿನ್ನೆ ನಡೆದ ಒಂದು ‘ಬ್ರೇಕ್‌ಫಾಸ್ಟ್ ಮೀಟಿಂಗ್’ ಮೂಲಕ ಅಲ್ಪ ವಿರಾಮ ಪಡೆದಿದ್ದು, ಎರಡೂ ನಾಯಕರು ತಮ್ಮ ಮುಂದಿನ ನಡೆಗಾಗಿ ಹೈಕಮಾಂಡ್ ನಿರ್ಧಾರಕ್ಕಾಗಿ ಕಾಯುತ್ತಿದ್ದಾರೆ.
ನಿನ್ನೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆದಿದ್ದ ಹೈಕಮಾಂಡ್ ಸಭೆಯಲ್ಲಿ ಸಂಸತ್ ಅಧಿವೇಶನದ ಅಜೆಂಡಾಗಳ ಕುರಿತು ಮಾತ್ರ ಚರ್ಚೆ ನಡೆದಿತ್ತು. ಆದರೆ, ಈ ಬೆನ್ನಲ್ಲೇ ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ‘ಕೈ’ ನಾಯಕಿ ಸೋನಿಯಾ ಗಾಂಧಿ ಅವರಿಗೆ ರಾಜ್ಯದ ರಾಜಕೀಯ ವಿದ್ಯಮಾನಗಳ ಕುರಿತು ಪ್ರತ್ಯೇಕವಾಗಿ ವರದಿ ಸಲ್ಲಿಸಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಸಿದ್ದು-ಡಿಕೆಶಿ ನಡುವಿನ ಬ್ರೇಕ್‌ಫಾಸ್ಟ್ ಮೀಟಿಂಗ್ ಹಾಗೂ ಜಂಟಿ ಸುದ್ದಿಗೋಷ್ಠಿ ಕುರಿತು ಖರ್ಗೆಯವರು 2-3 ನಿಮಿಷಗಳ ಕಾಲ ಸೋನಿಯಾ ಗಾಂಧಿ ಅವರಿಗೆ ಮಾಹಿತಿ ನೀಡಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ಮನವರಿಕೆ ಮಾಡಿ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸೋನಿಯಾ ಗಾಂಧಿ, ಈ ವಿಷಯವನ್ನು ಶೀಘ್ರವೇ ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ. ಆದರೆ, ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಅವರನ್ನು ದೆಹಲಿಗೆ ಕರೆಸುವ ವಿಚಾರವನ್ನು ಸದ್ಯಕ್ಕೆ ಮುಂದೂಡಲಾಗಿದೆ.
ತಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಪುನರುಚ್ಚರಿಸಿದ ಡಿಕೆ ಶಿವಕುಮಾರ್, ‘ಹೈಕಮಾಂಡ್ ಹೇಳಿದಂತೆ ನಡೆದುಕೊಳ್ತೀವಿ’ ಎಂದಿದ್ದಾರೆ. ಕುರ್ಚಿಗಾಗಿ ಜಿದ್ದಿಗೆ ಬಿದ್ದಿರುವ ಈ ಇಬ್ಬರೂ ಪ್ರಭಾವಿ ನಾಯಕರು ನಿನ್ನೆ ಸಂಧಾನದ ಬ್ರೇಕ್‌ಫಾಸ್ಟ್‌ನಲ್ಲಿ ಭಾಗಿಯಾಗುವ ಮೂಲಕ ತಮ್ಮ ಶೀತಲ ಸಮರಕ್ಕೆ ಅಲ್ಪ ವಿರಾಮ ನೀಡಿದ್ದಾರೆ. ಇದೀಗ ಹೈಕಮಾಂಡ್‌ನ ಅಂತಿಮ ನಿರ್ಧಾರದತ್ತ ಇಡೀ ರಾಜ್ಯದ ಚಿತ್ತ ನೆಟ್ಟಿದೆ.

