ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನ ಸರ್ಕಾರ ಇತ್ತೀಚೆಗೆ ತಂದಿರುವ ಸಾಂವಿಧಾನಿಕ ತಿದ್ದುಪಡಿಗಳು ಆ ದೇಶದ ರಕ್ಷಣಾ ವ್ಯವಸ್ಥೆಯೊಳಗಿನ ದೌರ್ಬಲ್ಯವನ್ನು ಸಾಬೀತುಪಡಿಸಿವೆ ಎಂದು ಭಾರತದ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಟೀಕಿಸಿದ್ದಾರೆ.
ಇತ್ತೀಚಿನ ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆಯ ಸಮಯದಲ್ಲಿ ಪಾಕಿಸ್ತಾನದ ರಕ್ಷಣಾ ವ್ಯವಸ್ಥೆಯಲ್ಲಿದ್ದ ನ್ಯೂನತೆಗಳು ಜಗಜ್ಜಾಹೀರಾಗಿವೆ. ಈ ಮುಖಭಂಗವನ್ನು ಮರೆಮಾಚಲು ಪಾಕಿಸ್ತಾನವು ಗಡಿಬಿಡಿಯಿಂದ ತನ್ನ ಸಂವಿಧಾನಕ್ಕೆ ತಿದ್ದುಪಡಿ ತಂದಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.
ಪಾಕಿಸ್ತಾನವು ತನ್ನ ಸಂವಿಧಾನದ 243ನೇ ವಿಧಿಗೆ ತಿದ್ದುಪಡಿ ತರುವ ಮೂಲಕ ರಕ್ಷಣಾ ರಚನೆಯಲ್ಲಿ ಭಾರಿ ಬದಲಾವಣೆ ಮಾಡಿದೆ. ವಿಶೇಷವಾಗಿ ಮೂರು ಸೇವೆಗಳ ನಡುವಿನ ಸಮನ್ವಯಕ್ಕಾಗಿ ಇದ್ದ ‘ಜಂಟಿ ಮುಖ್ಯಸ್ಥರ’ ಹುದ್ದೆಯನ್ನು ರದ್ದುಗೊಳಿಸಿರುವುದು ಅವರ ಹಿನ್ನಡೆಯನ್ನು ತೋರಿಸುತ್ತದೆ ಎಂದು ಚೌಹಾಣ್ ವಿವರಿಸಿದರು.
ಪಾಕಿಸ್ತಾನ ತನ್ನ ತಪ್ಪುಗಳನ್ನು ಮುಚ್ಚಿಡಲು ಯತ್ನಿಸುತ್ತಿದ್ದರೆ, ಭಾರತವು ಕಳೆದ ಕಾರ್ಯಾಚರಣೆಗಳಿಂದ ಪಾಠ ಕಲಿತು ತನ್ನ ರಕ್ಷಣಾ ಸಿದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತಿದೆ. ದೀರ್ಘಕಾಲೀನ ಮಿಲಿಟರಿ ಯೋಜನೆ ಮತ್ತು ಉನ್ನತ ಕಮಾಂಡ್ ರಚನೆಗಳಲ್ಲಿ ಅಗತ್ಯ ಬದಲಾವಣೆಗಳನ್ನು ತರುವ ಮೂಲಕ ಭಾರತೀಯ ಸೇನೆ ಆಧುನೀಕರಣದತ್ತ ಹೆಜ್ಜೆ ಹಾಕುತ್ತಿದೆ ಎಂದು ಅವರು ತಿಳಿಸಿದರು.

