ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಗ್ನೇಯ ಇರಾನ್‌ನ (Iran) ಸಿಸ್ತಾನ್-ಬಲೂಚಿಸ್ತಾನ್ ಪ್ರಾಂತ್ಯದ ರಾಜಧಾನಿ ಜಹೇದಾನ್‌ನಲ್ಲಿರುವ ನ್ಯಾಯಾಂಗ ಕೇಂದ್ರದ ಮೇಲೆ ಭಯೋತ್ಪಾದಕ ದಾಳಿ ನಡೆದಿದೆ.
ಭಯೋತ್ಪಾದಕ ದಾಳಿಯಲ್ಲಿ ಐದು ನಾಗರಿಕರು ಮತ್ತು ಮೂವರು ದಾಳಿಕೋರರು ಸೇರಿ ಒಟ್ಟು 8 ಜನರು ಮೃತಪಟ್ಟಿದ್ದಾರೆ.
ಆಗ್ನೇಯ ಸಿಸ್ತಾನ್ ಬಲೂಚಿಸ್ತಾನ್ ಪ್ರಾಂತ್ಯದ ರಾಜಧಾನಿ ಜಹೇದನ್‌ನಲ್ಲಿರುವ ನ್ಯಾಯಾಂಗ ಕೇಂದ್ರದಲ್ಲಿರುವ ನ್ಯಾಯಾಧೀಶರ ಕೊಠಡಿಗೆ ಅಪರಿಚಿತ ಬಂದೂಕುಧಾರಿಗಳು ನುಗ್ಗಿದರು. ಅಧಿಕೃತ ಮೂಲಗಳ ಪ್ರಕಾರ, ಈ ದಾಳಿಯಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು 13 ಜನರು ಗಾಯಗೊಂಡಿದ್ದಾರೆ.
ಪ್ರತ್ಯೇಕ ವರದಿಯಲ್ಲಿ, ರಾಜ್ಯ ಸ್ವಾಮ್ಯದ ಐಆರ್ಎನ್ಎ ಸುದ್ದಿ ಸಂಸ್ಥೆ ಘಟನೆಯ ಸಮಯದಲ್ಲಿ ಮೂವರು ದಾಳಿಕೋರರು ಸಹ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದೆ.
ವರದಿಗಳ ಪ್ರಕಾರ, ಸುನ್ನಿ ಉಗ್ರಗಾಮಿ ಗುಂಪು ಜೈಶ್ ಅಲ್-ಅದ್ಲ್ ಜೊತೆ ಸಂಪರ್ಕ ಹೊಂದಿರುವ ಬಂದೂಕುಧಾರಿಗಳು ಜಹೇದಾನ್‌ನಲ್ಲಿರುವ ನ್ಯಾಯಾಲಯದ ಮೇಲೆ ದಾಳಿ ನಡೆಸಿದ್ದಾರೆ.
ಜೈಶ್ ಅಲ್-ಅದ್ಲ್ ಹೇಳಿಕೆಯಲ್ಲಿ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ಹಲವಾರು ಜನರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಮೆಹರ್ ಸುದ್ದಿ ಸಂಸ್ಥೆ ತಿಳಿಸಿದೆ.