ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಹೊಸ ವರ್ಷಾಚರಣೆಗೆ ದೇಶವೇ ಸಜ್ಜಾಗುತ್ತಿದ್ದು, ಈ ಕ್ಷಣದಲ್ಲಿ ಗಡಿಯಲ್ಲಿ ಉಗ್ರರ ಕರಿ ನೆರಳು ಬಿದ್ದಿದೆ. ಈ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಪೂಂಚ್, ಕಿಶ್ತ್ವಾರ್ ಜಿಲ್ಲೆಗಳ ಕಣಿವೆ ಪ್ರದೇಶಗಳಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ದೋಡಾ-ಕಿಶ್ತ್ವಾರ್ ಅರಣ್ಯ ಪ್ರದೇಶಗಳಲ್ಲಿ ಎರಡು ಭಯೋತ್ಪಾದಕ ಗುಂಪುಗಳು ಕಾರ್ಯನಿರ್ವಹಿಸುತ್ತಿವೆ ಎಂಬ ಮಾಹಿತಿಯ ಮೇರೆಗೆ ಕೇಶ್ವಾನ್-ಚತ್ರೂ ಕಣಿವೆಯಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿವೆ. ಭಯೋತ್ಪಾದಕರನ್ನು ಪತ್ತೆ ಹಚ್ಚಲು ಮತ್ತು ಈ ಪ್ರದೇಶದ ಮೇಲೆ ನಿಗಾ ವಹಿಸಲು ಡ್ರೋನ್ ಮತ್ತಿತರ ವೈಮಾನಿಕ ಕಣ್ಗಾವಲು ಸಲಕರಣೆಗಳನ್ನು ಪಡೆಗಳು ಬಳಸಿವೆ.
ವರದಿಗಳ ಪ್ರಕಾರ, ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರ ಎರಡು ಗುಂಪುಗಳು ಈ ಪ್ರದೇಶದಲ್ಲಿ ಇರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ಹಿಂದೆ ಇಲ್ಲಿ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ಎನ್ ಕೌಂಟರ್ ನಡೆದಿತ್ತು.

