ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಅಭಿಯಾನಗಳು ಮತ್ತು ಪ್ರಚೋದನಕಾರಿ ಹೇಳಿಕೆಗಳು ಹೆಚ್ಚುತ್ತಿರುವ ಕಾರಣ, ಪಶ್ಚಿಮ ಬಂಗಾಳದ ಸಿಲಿಗುರಿಯಾದ್ಯಂತವಿರುವ ಹೊಟೇಲ್ ಗಳು ಹೊಸ ವರ್ಷದ ಅವಧಿಯಲ್ಲಿ ಬಾಂಗ್ಲಾದೇಶಿ ಪ್ರಜೆಗಳಿಗೆ ವಸತಿ ಸೌಲಭ್ಯ ನಿರಾಕರಿಸಲು ನಿರ್ಧರಿಸಿವೆ.
ಗ್ರೇಟರ್ ಸಿಲಿಗುರಿ ಹೊಟೇಲ್ ವೆಲ್ಫೇರ್ ಅಸೋಸಿಯೇಷನ್ , ಈ ವರ್ಷ ನೀಡಲಾಗಿದ್ದ ಹಿಂದಿನ ವಿನಾಯಿತಿಯನ್ನು ಈಗ ಹಿಂಪಡೆಯಲಾಗಿದೆ ಎಂದು ಹೇಳಿದೆ. ಇದರ ಪರಿಣಾಮವಾಗಿ, ಯಾವುದೇ ಬಾಂಗ್ಲಾದೇಶಿ ಪ್ರಜೆಗಳು ನಗರದ ಹೊಟೇಲ್‌ಗಳಲ್ಲಿ ಉಳಿಯಲು ಅವಕಾಶ ನೀಡಲಾಗುವುದಿಲ್ಲ ಎಂದು ತಿಳಿಸಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಮೊದಲು ಬಹಿಷ್ಕಾರವನ್ನು ಜಾರಿಗೆ ತರಲಾಯಿತು ಎಂದು ಸಂಘದ ಜಂಟಿ ಕಾರ್ಯದರ್ಶಿ ಉಜ್ವಲ್ ಘೋಷ್ ತಿಳಿಸಿದರು. ಈ ವರ್ಷ ನಾವು ಸಡಿಲಿಕೆ ನೀಡಿದ್ದೆವು, ಅದನ್ನು ಈಗ ಹಿಂತೆಗೆದುಕೊಂಡಿದ್ದೇವೆ. ಈ ಬಾರಿ ಸಿಲಿಗುರಿಯ ಯಾವುದೇ ಹೊಟೇಲ್‌ನಲ್ಲಿ ಯಾವುದೇ ಬಾಂಗ್ಲಾದೇಶಿ ಪ್ರಜೆಗಳಿಗೆ ತಂಗಲು ಅವಕಾಶವಿಲ್ಲ ಎಂದು ಅವರು ಹೇಳಿದರು.
ವಿದ್ಯಾರ್ಥಿ ವೀಸಾ ಅಥವಾ ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಭೇಟಿ ನೀಡುವ ಬಾಂಗ್ಲಾದೇಶಿಗಳಿಗೂ ಈ ನಿರ್ಬಂಧ ಅನ್ವಯಿಸುತ್ತದೆ. ಬಾಂಗ್ಲಾದೇಶಿಗರು ಪದೇ ಪದೆ ಭಾರತ ವಿರೋಧಿ ಹೇಳಿಕೆಗಳನ್ನು ನೀಡುತ್ತಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಘೋಷ್ ವಿವರಿಸಿದ್ದಾರೆ.

