March 31, 2026
Tuesday, March 31, 2026
spot_img

ದಳಪತಿ ‘ವಿಜಯ’ ಸಂಕಲ್ಪ: ತಮಿಳುನಾಡಿನ ಹೆಣ್ಣುಮಕ್ಕಳಿಗೆ ಭರ್ಜರಿ ಗಿಫ್ಟ್ ಘೋಷಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿರುವ ನಟ ದಳಪತಿ ವಿಜಯ್, ತಮ್ಮ ‘ತಮಿಳಗ ವೆಟ್ರಿ ಕಳಗಂ’ ಪಕ್ಷದ ವತಿಯಿಂದ ಮಹಿಳಾ ಸಬಲೀಕರಣಕ್ಕಾಗಿ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಘೋಷಿಸಿದ್ದಾರೆ. “ವಿಜಯದ ಪಯಣ” ಹೆಸರಿನಡಿ ಅವರು ಪ್ರಕಟಿಸಿರುವ ಭರವಸೆಗಳು ಮಹಿಳೆಯರ ಸುರಕ್ಷತೆ ಮತ್ತು ಆರ್ಥಿಕ ಸ್ವಾವಲಂಬನೆಗೆ ಹೆಚ್ಚಿನ ಒತ್ತು ನೀಡಿವೆ.

ರಾಜ್ಯದ ಎಲ್ಲಾ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಸಂಪೂರ್ಣ ಉಚಿತ ಪ್ರಯಾಣದ ಭರವಸೆ ನೀಡಲಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಮಹಿಳಾ ಸುರಕ್ಷತೆಗಾಗಿ ಬಾಡಿ ಕ್ಯಾಮೆರಾ ಧರಿಸಿದ ಮಹಿಳಾ ಅಧಿಕಾರಿಗಳ ವಿಶೇಷ ಪಡೆಯನ್ನು ರಚಿಸಲಾಗುವುದು. ಅಲ್ಲದೆ, ಖಾಸಗಿ ಆಟೋ ಸೇರಿದಂತೆ ಎಲ್ಲಾ ವಾಹನಗಳಲ್ಲಿ ಪ್ಯಾನಿಕ್ ಬಟನ್ ಅಳವಡಿಸಿ, ಕೇವಲ 5 ನಿಮಿಷಗಳಲ್ಲಿ ನೆರವು ಸಿಗುವಂತೆ ಕ್ರಮ ಕೈಗೊಳ್ಳಲಾಗುವುದು.

ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ತ್ವರಿತ ವಿಚಾರಣಾ ನ್ಯಾಯಾಲಯಗಳ ಸ್ಥಾಪನೆ, ಬೀದಿ ದೀಪಗಳ ಅಳವಡಿಕೆ ಹಾಗೂ ಶಾಲೆ-ಕಾಲೇಜುಗಳಲ್ಲಿ ಉಚಿತ ಸ್ಯಾನಿಟರಿ ಪ್ಯಾಡ್ ವಿತರಣೆಗೆ ಒತ್ತು ನೀಡಲಾಗಿದೆ.

ಮಹಿಳಾ ಸ್ವಸಹಾಯ ಸಂಘಗಳಿಗೆ 5 ಲಕ್ಷ ರೂಪಾಯಿವರೆಗೆ ಬಡ್ಡಿರಹಿತ ಸಾಲ ಹಾಗೂ ಸಣ್ಣ ಉದ್ದಿಮೆಗಳಾಗಿ ಬದಲಾಗುವ ಸಂಘಗಳಿಗೆ 5 ಲಕ್ಷ ರೂಪಾಯಿವರೆಗೆ 100% ಅನುದಾನ ನೀಡುವುದಾಗಿ ವಿಜಯ್ ಭರವಸೆ ನೀಡಿದ್ದಾರೆ.

ಮಹಿಳೆಯರಷ್ಟೇ ಅಲ್ಲದೆ ಶಿಶುಗಳ ಕಲ್ಯಾಣಕ್ಕೂ ವಿಜಯ್ ವಿಶೇಷ ಯೋಜನೆ ಪ್ರಕಟಿಸಿದ್ದಾರೆ. ತಮಿಳುನಾಡಿನಲ್ಲಿ ಜನಿಸುವ ಪ್ರತಿಯೊಂದು ಮಗುವಿಗೆ ಸರ್ಕಾರದ ವತಿಯಿಂದ ಚಿನ್ನದ ಉಂಗುರ ಹಾಗೂ ಮಗುವಿಗೆ ಅಗತ್ಯವಿರುವ ಬಟ್ಟೆ, ಆಟಿಕೆ, ನ್ಯಾಪ್ಕಿನ್ ಒಳಗೊಂಡ ಸಂಪೂರ್ಣ ಕಿಟ್ ವಿತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈ ಘೋಷಣೆಗಳು ಮುಂಬರುವ ಚುನಾವಣೆಯಲ್ಲಿ ದೊಡ್ಡ ಮಟ್ಟದ ಪ್ರಭಾವ ಬೀರುವ ನಿರೀಕ್ಷೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !