ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ದಳಪತಿ ವಿಜಯ್ ಅವರು ರಾಜಕೀಯಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಭಾರಿ ಟೀಕೆಗೆ ಗುರಿಯಾಗಿದ್ದರು. ತಮಿಳುನಾಡಿನ ಕರೂರಿನಲ್ಲಿ ಅವರ ಪಕ್ಷದ ರ್‍ಯಾಲಿಯ ವೇಳೆ ನಡೆದ ಕಾಲ್ತುಳಿತದಲ್ಲಿ 41 ಮಂದಿ ಪ್ರಾಣ ಕಳೆದುಕೊಂಡಿದ್ದರು. ನೂರಾರು ಜನರಿಗೆ ಗಾಯಗಳಾಗಿದ್ದ ಈ ದುರಂತದ ಬೆನ್ನಲ್ಲೇ, ವಿಜಯ್ ಅವರು ಮತ್ತೆ ಅಪಾರ ಸಂಖ್ಯೆಯಲ್ಲಿ ಜನರನ್ನು ಸೇರಿಸಲು ಸಿದ್ಧರಾಗಿದ್ದಾರೆ. ಆದರೆ ಈ ಬಾರಿ ರಾಜಕೀಯಕ್ಕಾಗಿ ಅಲ್ಲ, ಬದಲಾಗಿ ಅವರ ಬಹುನಿರೀಕ್ಷಿತ ಹಾಗೂ ಕೊನೆಯ ಸಿನಿಮಾ ‘ಜನ ನಾಯಗನ್’ ಗಾಗಿ!
ರಾಜಕೀಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಸಲುವಾಗಿ ವಿಜಯ್ ಅವರು ಸಿನಿಮಾ ರಂಗಕ್ಕೆ ವಿದಾಯ ಹೇಳುತ್ತಿದ್ದು, 2026ರ ಜನವರಿ 9 ರಂದು ಬಿಡುಗಡೆಯಾಗಲಿರುವ ‘ಜನ ನಾಯಗನ್’ ಅವರ ಕೊನೆಯ ಚಿತ್ರವಾಗಲಿದೆ. ಈ ಮಹತ್ವದ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲು ಚಿತ್ರತಂಡ ಸಜ್ಜಾಗಿದೆ.
ಮಲೇಷ್ಯಾದಲ್ಲಿ ‘ಜನ ನಾಯಗನ್’ ವಿಶ್ವ ದಾಖಲೆಯ ಯತ್ನ
ವಿಜಯ್ ಅವರ ಸಿನಿ ಪಯಣಕ್ಕೆ ಗೌರವ ಸಲ್ಲಿಸುವ ಉದ್ದೇಶದಿಂದ, ಈ ಸಂಗೀತ ಕಾರ್ಯಕ್ರಮವನ್ನು ಭಾರತದಲ್ಲಿ ಅಲ್ಲದೆ, ಮಲೇಷ್ಯಾದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಡಿಸೆಂಬರ್ 27 ರಂದು ಒಂದು ಲಕ್ಷ ಆಸನಗಳ ಸಾಮರ್ಥ್ಯವಿರುವ ಮಲೇಷ್ಯಾ ಸ್ಟೇಡಿಯಂನಲ್ಲಿ ಈ ಗ್ರ್ಯಾಂಡ್ ಕಾರ್ಯಕ್ರಮ ನಡೆಯಲಿದೆ.
ಲಕ್ಷಾಂತರ ಅಭಿಮಾನಿಗಳು ಮತ್ತು ಪ್ರಮುಖ ಸಂಗೀತಗಾರರು ಪಾಲ್ಗೊಳ್ಳಲಿರುವ ಈ ಕಾರ್ಯಕ್ರಮದ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಲು ಚಿತ್ರತಂಡ ಯೋಜನೆ ರೂಪಿಸಿದೆ. ದುಬಾರಿ ಬೆಲೆಗೆ ಟಿಕೆಟ್‌ಗಳು ಮಾರಾಟವಾಗುತ್ತಿದ್ದು, ಈ ಮೆಗಾ ಈವೆಂಟ್ ತಮಿಳು ಚಿತ್ರರಂಗದ ಇತಿಹಾಸದಲ್ಲಿಯೇ ಅತಿ ದೊಡ್ಡ ಆಡಿಯೋ ರಿಲೀಸ್ ಸಮಾರಂಭವಾಗಲಿದೆ ಎನ್ನಲಾಗಿದೆ. ಟಿಪ್ಪು, ಎಸ್.ಪಿ.ಬಿ. ಚರಣ್, ಅನುರಾಧಾ ಶ್ರೀರಾಮ್, ವಿಜಯ್ ಏಸುದಾಸ್ ಮುಂತಾದ ಖ್ಯಾತ ಗಾಯಕರು ತಮ್ಮ ಸಂಗೀತದ ಮೂಲಕ ದಳಪತಿ ವಿಜಯ್ ಅವರಿಗೆ ಗೌರವ ಸಲ್ಲಿಸಲಿದ್ದಾರೆ.
ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸಿರುವ ಮತ್ತು ಹೆಚ್. ವಿನೋದ್ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ವಿಜಯ್ ಅವರಿಗೆ ನಾಯಕಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದರೆ, ಬಾಬಿ ಡಿಯೋಲ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅಭಿಮಾನಿಗಳಲ್ಲಿ ಈ ಚಿತ್ರದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ.

