Friday, November 21, 2025

ಬೀದರ್‌ನಲ್ಲಿ ಜಿಲ್ಲಾಡಳಿತ-ರೈತರ 4ನೇ ಸುತ್ತಿನ ಸಭೆ ವಿಫಲ; ರೈತ ಮುಖಂಡರಿಂದ ಸಭೆ ಬಹಿಷ್ಕಾರ!

ಹೊಸದಿಗಂತ ಬೀದರ್:

ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ನಡೆದ ಜಿಲ್ಲಾಡಳಿತ ಹಾಗೂ ರೈತರ ನಡುವಿನ ನಾಲ್ಕನೇ ಸುತ್ತಿನ ಮಹತ್ವದ ಸಭೆಯಲ್ಲಿ ಕಬ್ಬಿನ ದರ ನಿಗದಿ ಕುರಿತು ಒಮ್ಮತ ಮೂಡದೆ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.

ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು, ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳು ಒಪ್ಪಿರುವ ಟನ್ ಕಬ್ಬಿಗೆ ₹2950 ಬೆಲೆಯೇ ಅಂತಿಮ ಎಂದು ಘೋಷಿಸಿದರು. “ರಿಕವರಿ ರೇಟ್” ಆಧಾರದ ಮೇಲೆ ಈ ಬೆಲೆ ನಿರ್ಧರಿಸಲಾಗಿದ್ದು, ಇದು ಎಲ್ಲರಿಗೂ ಲಾಭದಾಯಕವಾಗಿದೆ. ಪ್ರತಿಭಟನೆ ಮುಂದುವರೆದರೆ ಕಬ್ಬು ನುರಿಸುವ ಕಾರ್ಯ ವಿಳಂಬವಾಗಿ ರೈತರು ಹಾನಿ ಅನುಭವಿಸಬೇಕಾಗುತ್ತದೆ. ರೈತರು ಒಪ್ಪಿದರೆ, ಜಿಲ್ಲಾಡಳಿತವು ಕಾರ್ಖಾನೆ ಮಾಲೀಕರಿಂದ ಸಕಾಲಕ್ಕೆ ಬಾಕಿ ಹಣ ಪಾವತಿಸುವ ಜವಾಬ್ದಾರಿ ವಹಿಸಿಕೊಳ್ಳುತ್ತದೆ ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.

ರೈತ ಮುಖಂಡರಿಂದ ಸಭೆ ಬಹಿಷ್ಕಾರ

ಆದರೆ, ಜಿಲ್ಲಾಡಳಿತದ ಈ ನಿರ್ಧಾರಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದರು. ರೈತ ಮುಖಂಡ ಶಿವರಾಜ್ ಪಾಟೀಲ್ ಅತಿವಾಳ ಮಾತನಾಡಿ, ಟನ್ ಕಬ್ಬಿಗೆ ₹3100 ಬೆಂಬಲ ಬೆಲೆ ನ್ಯಾಯಯುತವಾದ ಬೇಡಿಕೆ. ವೈಜ್ಞಾನಿಕವಾಗಿ ಮತ್ತು ಕೇಂದ್ರ ಸರ್ಕಾರದ ಎಫ್.ಆರ್.ಪಿ (FRP) ಬೆಲೆ ಮಾನದಂಡದ ಪ್ರಕಾರ ಕೂಡ ನಮ್ಮ ಬೇಡಿಕೆ ಸರಿಯಾಗಿದೆ. ರಾಜ್ಯ ಸರ್ಕಾರದ ಹಾಗೂ ಕಾರ್ಖಾನೆ ಮಾಲೀಕರ ಒತ್ತಡಕ್ಕೆ ಜಿಲ್ಲಾಡಳಿತ ಮಣಿದರೆ, ನಮ್ಮ ಹಕ್ಕನ್ನು ಯಾರ ಎದುರು ಮಂಡಿಸಬೇಕು?” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಸಭೆಯಿಂದ ಹೊರನಡೆದರು.

ಇದರಿಂದ ಸಭೆಯಲ್ಲಿ ಕೆಲಹೊತ್ತು ಗೊಂದಲ ಉಂಟಾಯಿತು. ವಾತಾವರಣ ತಿಳಿಯಾದ ನಂತರವೂ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ರೈತರನ್ನು ಪುನಃ ಟನ್ ಕಬ್ಬಿಗೆ ₹2950 ಬೆಲೆ ಒಪ್ಪಿಗೆಯ ಬಗ್ಗೆ ಪ್ರಶ್ನಿಸಿ, ರೈತರು ಒಪ್ಪಿದಾಗ ಇದೇ ಬೆಲೆ ಫೈನಲ್ ಎಂದು ಘೋಷಿಸಿ, ಪ್ರತಿಭಟನೆ ಕೊನೆಗೊಳಿಸಲು ಕೋರಿ ಸಭೆಯನ್ನು ಮುಕ್ತಾಯಗೊಳಿಸಿದರು.

ಸಭೆಯ ನಂತರ, ರೈತ ಮುಖಂಡರಾದ ಮಲ್ಲಿಕಾರ್ಜುನ ಸ್ವಾಮಿ, ಶಿವಕುಮಾರ್ ಸ್ವಾಮಿ, ಸುಮಂತ್ ಗ್ರಾಮಲೆ, ವಿ.ಕೆ.ದೇಶಪಾಂಡೆ, ಕೃಷ್ಣಾ ರೆಡ್ಡಿ ಬಸವಕಲ್ಯಾಣ, ಮಾಣಿಕಪ್ಪಾ ಕಾರಬಾರಿ ಅವರ ನೇತೃತ್ವದಲ್ಲಿ ನೂರಾರು ರೈತರು ಚರ್ಚಿಸಿ, ತಮ್ಮ ಹೋರಾಟವನ್ನು ತಾತ್ಕಾಲಿಕವಾಗಿ ಮುಕ್ತಾಯಗೊಳಿಸುವ ಬಗ್ಗೆ ಘೋಷಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಪೋಲಿಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟೆ, ಹಾಗೂ ವಿವಿಧ ರೈತ ಮುಖಂಡರು ಉಪಸ್ಥಿತರಿದ್ದರು.

error: Content is protected !!