January21, 2026
Wednesday, January 21, 2026
spot_img

ವೈರಿ ದೇಶಗಳ ಪ್ರಚೋದನೆಗೆ ತಕ್ಕ ಉತ್ತರ ನೀಡಲು ವಾಯುಪಡೆ ಸದಾ ಸಜ್ಜು: ಶತ್ರುರಾಷ್ಟ್ರಕ್ಕೆ ಏರ್ ಚೀಫ್ ಮಾರ್ಷಲ್ ಖಡಕ್ ವಾರ್ನ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ವಾಯುಪಡೆಯ ಶಕ್ತಿ ಮತ್ತು ಸಾಹಸವನ್ನು ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್ ಕೊಂಡಾಡಿದ್ದಾರೆ.

ಬುಧವಾರ ಮಾತನಾಡಿದ ಎಪಿ ಸಿಂಗ್ ಅವರು, ಭಾರತೀಯ ವಾಯುಪಡೆಯ ಕಾರ್ಯಾಚರಣಾ ಸಾಮರ್ಥ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. ನಾವು ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನದ ಅನೇಕ ಗುರಿಗಳ ಮೇಲೆ ದಾಳಿ ಮಾಡಿ, ಅವರನ್ನು ನೆಲಕಚ್ಚುವಂತೆ ಮಾಡುವ ಶಕ್ತಿ ಹೊಂದಿದ್ದೇವೆ. ಸುಡಾನ್‌ನಂತಹ ಯುದ್ಧ ವಲಯಗಳಿಂದ ಜನರನ್ನು ಸ್ಥಳಾಂತರಿಸುವುದಿರಲಿ ಅಥವಾ ಭಯೋತ್ಪಾದಕ ತಾಣಗಳ ಮೇಲೆ ದಾಳಿ ಮಾಡುವುದಿರಲಿ, ನಮ್ಮ ವಾಯುಪಡೆ ಎಲ್ಲೆಡೆ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ ಎಂದು ಅವರು ಹೆಮ್ಮೆಯಿಂದ ಹೇಳಿದರು.

ದೇಶವನ್ನು ರಕ್ಷಿಸಲು ಕೇವಲ ಆರ್ಥಿಕ ಶಕ್ತಿಯನ್ನು ಹೊಂದಿದ್ದರೆ ಸಾಲದು. ಮಿಲಿಟರಿ ಶಕ್ತಿಯು ರಾಷ್ಟ್ರೀಯ ಶಕ್ತಿಯ ಅಂತಿಮ ಅಳತೆಯಾಗಿದೆ. ಈ ಹಿಂದೆ ನಾವು ಮತ್ತು ಚೀನಾ ಸೇರಿ ವಿಶ್ವದ ಒಟ್ಟು GDPಯ ಶೇ. 60 ರಷ್ಟನ್ನು ಹೊಂದಿದ್ದೆವು. ಆದರೂ ಮಿಲಿಟರಿ ಬಲದ ಕೊರತೆಯಿಂದಾಗಿ ನಾವು ವಿದೇಶಿಯರ ಆಕ್ರಮಣಕ್ಕೆ ಒಳಗಾಗಬೇಕಾಯಿತು ಮತ್ತು ವಸಾಹತುಶಾಹಿಯಾಗಬೇಕಾಯಿತು ಎಂದು ಇತಿಹಾಸವನ್ನು ನೆನಪಿಸಿದರು.

ಬಲಿಷ್ಠ ಸೇನೆ ಇಲ್ಲದಿದ್ದರೆ ಯಾರಾದರೂ ನಿಮ್ಮ ಮೇಲೆ ದಾಳಿ ಮಾಡಬಹುದು, ಇದಕ್ಕೆ ಇರಾಕ್ ಮತ್ತು ವೆನೆಜುವೆಲಾ ದೇಶಗಳೇ ಸಾಕ್ಷಿ ಎಂದ ಎಪಿ ಸಿಂಗ್ ಅವರು, ಸೈನ್ಯದ ಜೊತೆಗೆ ಅದನ್ನು ಬಳಸುವ ರಾಜಕೀಯ ಇಚ್ಛಾಶಕ್ತಿಯೂ ಅಷ್ಟೇ ಮುಖ್ಯ ಎಂದರು. ನಿಮ್ಮ ಬಳಿ ಇಚ್ಛಾಶಕ್ತಿ ಇಲ್ಲದಿದ್ದರೆ ನಿಮ್ಮ ಸಂಯಮವನ್ನು ದೌರ್ಬಲ್ಯ ಎಂದು ಭಾವಿಸಲಾಗುತ್ತದೆ. ನೀವು ಬಲಿಷ್ಠರಾಗಿದ್ದು ಸಂಯಮ ತೋರಿದಾಗ ಮಾತ್ರ ಅದನ್ನು ‘ಸಾಮರ್ಥ್ಯ’ ಎಂದು ಜಗತ್ತು ಒಪ್ಪಿಕೊಳ್ಳುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಭಾರತವು ಮಿಲಿಟರಿ ಬಲದ ಮೇಲೆ ಹೆಚ್ಚು ಗಮನಹರಿಸುವುದು ಅತ್ಯಗತ್ಯ ಎಂದು ಹೇಳುವ ಮೂಲಕ, ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್ ಅವರು ಭಾರತದ ರಕ್ಷಣಾ ನೀತಿಯ ಮುಂದಿನ ದಾರಿಯನ್ನು ಸ್ಪಷ್ಟಪಡಿಸಿದರು. ವೈರಿ ರಾಷ್ಟ್ರಗಳ ಪ್ರಚೋದನೆಗೆ ತಕ್ಕ ಉತ್ತರ ನೀಡಲು ಭಾರತೀಯ ವಾಯುಪಡೆ ಸದಾ ಸಜ್ಜಾಗಿದೆ ಎಂಬ ಸಂದೇಶವನ್ನು ಈ ಮೂಲಕ ರವಾನಿಸಿದ್ದಾರೆ.

Must Read