Tuesday, November 11, 2025

ವಿಷಮಯವಾಗುತ್ತಿದೆ ಉಸಿರಾಡೋ ಗಾಳಿ: ಶೇ. 50ರಷ್ಟು ನೌಕರರಿಗೆ ವರ್ಕ್‌ ಫ್ರಮ್‌ ಹೋಮ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ರಾಜಧಾನಿ ದೆಹಲಿ ಮತ್ತೆ ವಿಷಕಾರಿ ಗಾಳಿಯಲ್ಲಿ ಮುಳುಗಿಹೋಗಿದೆ. ನಗರದ ವಾಯು ಗುಣಮಟ್ಟ ಸೂಚ್ಯಂಕ (AQI) 400 ಅಂಕಗಳನ್ನು ದಾಟಿ “ಅತ್ಯಂತ ಅಪಾಯಕಾರಿ” ಮಟ್ಟಕ್ಕೆ ತಲುಪಿರುವ ಹಿನ್ನೆಲೆಯಲ್ಲಿ, ದೆಹಲಿ ಸರ್ಕಾರ ತುರ್ತು ಕ್ರಮಗಳನ್ನು ಕೈಗೊಂಡಿದೆ. ಸರ್ಕಾರ ಶೇ.50ರಷ್ಟು ನೌಕರರಿಗೆ ವರ್ಕ್ ಫ್ರಮ್ ಹೋಮ್ ನೀಡುವುದಾಗಿ ಘೋಷಿಸಿದ್ದು, ಮಾಲಿನ್ಯ ಮತ್ತು ಟ್ರಾಫಿಕ್ ದಟ್ಟಣೆಯನ್ನು ತಗ್ಗಿಸುವ ಉದ್ದೇಶದಿಂದ ನವೆಂಬರ್ 15ರಿಂದ ಫೆಬ್ರವರಿ 15ರವರೆಗೆ ಸರ್ಕಾರಿ ಕಚೇರಿಗಳ ಕೆಲಸದ ಸಮಯವನ್ನು ಬದಲಿಸಲಾಗಿದೆ.

ಈಗ ಸರ್ಕಾರಿ ಕಚೇರಿಗಳು ಬೆಳಿಗ್ಗೆ 10ರಿಂದ ಸಂಜೆ 6.30ರವರೆಗೆ ಮತ್ತು ಮಹಾನಗರ ಪಾಲಿಕೆ ಕಚೇರಿಗಳು ಬೆಳಿಗ್ಗೆ 8.30ರಿಂದ ಸಂಜೆ 5ರವರೆಗೆ ಕಾರ್ಯನಿರ್ವಹಿಸಲಿವೆ.

ಇದರ ನಡುವೆ ದೆಹಲಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿರುವ ರೇಖಾ ಗುಪ್ತಾ ಅವರು ಹೊಸ ಮಾಲಿನ್ಯ ನಿಯಂತ್ರಣ ಅಭಿಯಾನವನ್ನು ಘೋಷಿಸಿದ್ದಾರೆ. ಕೊಳೆಗೇರಿ ಪ್ರದೇಶಗಳಲ್ಲಿ ಇನ್ನೂ ಒಲೆಗಳು ಅಥವಾ ಕಲ್ಲಿದ್ದಲು ಬಳಸುವ ಮನೆಗಳನ್ನು ಗುರುತಿಸಿ, ಉಜ್ವಲ ಯೋಜನೆಯಡಿ ಅವರಿಗೆ ಶುದ್ಧ ಇಂಧನ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಪ್ರಕಟಿಸಿರುವ ವರದಿ ಪ್ರಕಾರ, ದೆಹಲಿಯ 24 ಗಂಟೆಗಳ ಸರಾಸರಿ AQI 361 ಆಗಿದ್ದು, ಗಾಳಿಯ ಗುಣಮಟ್ಟ ತೀವ್ರ ಹದಗೆಟ್ಟಿರುವುದನ್ನು ತೋರಿಸಿದೆ. ದೆಹಲಿ ನಗರ ಆಶ್ರಯ ಸುಧಾರಣಾ ಮಂಡಳಿ (DUSIB) ಇದೀಗ ಎಲ್ಲ ಕೊಳೆಗೇರಿ ಪ್ರದೇಶಗಳಲ್ಲಿ ಸಮೀಕ್ಷೆ ಆರಂಭಿಸಿದೆ. ಈ ಕ್ರಮದಡಿ, ಮಾಲಿನ್ಯ ಹೆಚ್ಚಿಸುವ ಮೂಲಗಳನ್ನು ಗುರುತಿಸಿ ತಕ್ಷಣದ ಪರಿಹಾರ ಕ್ರಮ ಕೈಗೊಳ್ಳುವ ಗುರಿ ಹೊಂದಲಾಗಿದೆ.

ನಾಗರಿಕರಿಗೆ ಕಾರ್‌ಪೂಲ್ ಮಾಡುವಂತೆ, ಸಾರ್ವಜನಿಕ ಸಾರಿಗೆ ಬಳಸುವಂತೆ ಹಾಗೂ ಖಾಸಗಿ ಕಂಪನಿಗಳು ಸಾಧ್ಯವಾದಷ್ಟು ವರ್ಕ್ ಫ್ರಮ್ ಹೋಮ್ ಆಯ್ಕೆಯನ್ನು ನೀಡುವಂತೆ ರೇಖಾ ಗುಪ್ತಾ ವಿನಂತಿಸಿದ್ದಾರೆ. ಹೊರಾಂಗಣ ಚಟುವಟಿಕೆಗಳ ಮೇಲೆ GRAP-2 ನಿಯಮಗಳಡಿ ನಿರ್ಬಂಧ ಹೇರಲಾಗಿದೆ.

ದೆಹಲಿಯ ವಾಯು ಮಾಲಿನ್ಯವು ಪ್ರತಿ ಚಳಿಗಾಲದಲ್ಲೂ ಮರುಕಳಿಸುವ ಗಂಭೀರ ಸಮಸ್ಯೆಯಾಗಿ ಪರಿಣಮಿಸಿರುವ ಸಂದರ್ಭದಲ್ಲಿ, ಸರ್ಕಾರದ ಈ ಕ್ರಮಗಳು ನಾಗರಿಕರ ಆರೋಗ್ಯವನ್ನು ರಕ್ಷಿಸುವತ್ತ ಪ್ರಮುಖ ಹೆಜ್ಜೆಯಾಗಿ ಕಾಣಿಸುತ್ತಿವೆ.

error: Content is protected !!