Tuesday, November 4, 2025

ವಿಶ್ವಕಪ್ ಫೈನಲ್‌ನಲ್ಲಿ ವಿಶ್ವದಾಖಲೆ ನಿರ್ಮಿಸಿದ ಆಲ್‌ರೌಂಡರ್‌! ಟೂರ್ನಿಯ ಸೂಪರ್ ಸ್ಟಾರ್ ದೀಪ್ತಿ ಶರ್ಮಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವಕಪ್ ಕ್ರಿಕೆಟ್‌ನ ಫೈನಲ್‌ನಲ್ಲಿ ಅದ್ಭುತ ಆಲ್‌ರೌಂಡ್‌ ಪ್ರದರ್ಶನದ ಮೂಲಕ ಇತಿಹಾಸ ನಿರ್ಮಿಸಿದ ದೀಪ್ತಿ ಶರ್ಮಾ, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸಮಬಲ ಪ್ರದರ್ಶಿಸಿದ ಅವರು ಈ ಬಾರಿ ನಡೆದ ಟೂರ್ನಿಯ ನಿಜವಾದ ಸ್ಟಾರ್ ಎನಿಸಿಕೊಂಡಿದ್ದಾರೆ.

ಫೈನಲ್ ಪಂದ್ಯದಲ್ಲಿ ದೀಪ್ತಿ ಶರ್ಮಾ 58 ಎಸೆತಗಳಲ್ಲಿ 58 ರನ್‌ಗಳ ಅಮೂಲ್ಯ ಇನಿಂಗ್ಸ್‌ ಆಡಿದರು. ಅವರ ಬ್ಯಾಟಿಂಗ್‌ನಲ್ಲಿ 3 ಬೌಂಡರಿ ಮತ್ತು 1 ಸಿಕ್ಸ್‌ ಕೂಡ ಸೇರಿತ್ತು. ಬೌಲಿಂಗ್ ವಿಭಾಗದಲ್ಲಿಯೂ ಅವರು ಅದ್ಭುತ ಪ್ರದರ್ಶನ ತೋರಿಸಿ, 9.3 ಓವರ್‌ಗಳಲ್ಲಿ ಕೇವಲ 39 ರನ್ ನೀಡಿ 5 ವಿಕೆಟ್‌ಗಳನ್ನು ಕಿತ್ತುಕೊಂಡರು. ಅವರ ಈ ಪ್ರದರ್ಶನದಿಂದ ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.

ಈ ಯಶಸ್ಸಿನಿಂದ ದೀಪ್ತಿ ಶರ್ಮಾ ವಿಶ್ವಕಪ್ ಕ್ರಿಕೆಟ್‌ನಲ್ಲಿ ಅಪೂರ್ವ ದಾಖಲೆ ನಿರ್ಮಿಸಿದ್ದಾರೆ. ಈ ಬಾರಿ ನಡೆದ ಟೂರ್ನಿಯಲ್ಲಿ ಒಟ್ಟು 22 ವಿಕೆಟ್‌ಗಳನ್ನು ಪಡೆದು ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ ಆಗಿದ್ದಾರೆ. ಜೊತೆಗೆ 9 ಪಂದ್ಯಗಳ 7 ಇನ್ನಿಂಗ್ಸ್‌ಗಳಲ್ಲಿ ಒಟ್ಟು 215 ರನ್‌ ಬಾರಿಸಿ ಆಲ್‌ರೌಂಡ್‌ ಸಾಮರ್ಥ್ಯದ ನಿಜವಾದ ಉದಾಹರಣೆಯಾದರು.

ವಿಶ್ವಕಪ್ ಇತಿಹಾಸದಲ್ಲಿ ಒಂದೇ ಸರಣಿಯಲ್ಲಿ ಇಷ್ಟು ವಿಕೆಟ್‌ಗಳ ಜೊತೆಗೆ ಇಷ್ಟು ರನ್‌ ಗಳಿಸಿದ ಸಾಧನೆ ಯಾರಿಗೂ ಸಾಧ್ಯವಾಗಿರಲಿಲ್ಲ. ಈ ಕಾರಣಕ್ಕೆ ದೀಪ್ತಿ ಶರ್ಮಾ ಅವರಿಗೆ “ಸರಣಿಯ ಶ್ರೇಷ್ಠ ಆಟಗಾರ್ತಿ” ಎಂಬ ಗೌರವ ಲಭಿಸಿದೆ.

error: Content is protected !!