ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಸಂಗೀತ ಲೋಕದ ದಂತಕಥೆ, ಸಾವಿರಾರು ಸುಮಧುರ ಗೀತೆಗಳಿಗೆ ಧ್ವನಿಯಾಗಿದ್ದ ಆಶಾ ಭೋಸ್ಲೆ (92) ಅವರು ಇಂದು ವಿಧಿವಶರಾಗಿದ್ದಾರೆ. ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಗಣ್ಯರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
“ಆಶಾ ಭೋಸ್ಲೆ ಅವರ ನಿಧನದಿಂದ ನನಗೆ ತೀವ್ರ ದುಃಖವಾಗಿದೆ. ದಶಕಗಳ ಕಾಲ ಸಾಗಿದ ಅವರ ಅಸಾಧಾರಣ ಸಂಗೀತ ಪಯಣವು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಮತ್ತಷ್ಟು ಶ್ರೀಮಂತಗೊಳಿಸಿದೆ. ಅವರ ಧ್ವನಿ ಪ್ರಪಂಚದಾದ್ಯಂತ ಕೋಟ್ಯಂತರ ಹೃದಯಗಳನ್ನು ತಲುಪಿದೆ. ಅವರೊಂದಿಗೆ ನಾನು ನಡೆಸಿದ ಸಂವಾದಗಳು ಯಾವಾಗಲೂ ನನ್ನ ಮನಸ್ಸಿನಲ್ಲಿ ಸ್ಮರಣೀಯವಾಗಿ ಉಳಿಯಲಿವೆ. ಅವರ ಕುಟುಂಬ ಮತ್ತು ಅಸಂಖ್ಯಾತ ಸಂಗೀತ ಪ್ರೇಮಿಗಳಿಗೆ ನನ್ನ ಸಾಂತ್ವನಗಳು. ಮುಂಬರುವ ಪೀಳಿಗೆಗೂ ಅವರು ಸ್ಫೂರ್ತಿಯ ಸೆಲೆಯಾಗಿ ಉಳಿಯಲಿದ್ದಾರೆ,” ಎಂದು ಮೋದಿ ಭಾವುಕರಾಗಿ ಪೋಸ್ಟ್ ಮಾಡಿದ್ದಾರೆ.
ಎಂಟು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಆಶಾ ಅವರು ಕನ್ನಡ ಸೇರಿದಂತೆ ವಿವಿಧ ಭಾರತೀಯ ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ. ಮೆಲೋಡಿ, ಪಾಪ್, ಶಾಸ್ತ್ರೀಯ ಸಂಗೀತ ಹೀಗೆ ಪ್ರತಿಯೊಂದು ಪ್ರಕಾರದಲ್ಲೂ ತಮ್ಮದೇ ಆದ ಮುದ್ರೆ ಒತ್ತಿದ್ದ ಅವರ ನಿಧನದಿಂದ ಭಾರತೀಯ ಸಂಗೀತದ ಒಂದು ‘ಸುವರ್ಣ ಯುಗ’ ಅಂತ್ಯಗೊಂಡಂತಾಗಿದೆ.



