February 24, 2026
Tuesday, February 24, 2026
spot_img

ಡಾಂಬರ್ ಕಿತ್ತೋಗಿದೆ, ಓಡಾಡೋಕೆ ಆಗ್ತಿಲ್ಲ: ಬಾಳೆಗಿಡ ನೆಟ್ಟು ರಸ್ತೆತಡೆ ನಡೆಸಿದ ಬಿಜೆಪಿ ಕಾರ್ಯಕರ್ತರು!

ಹೊಸದಿಗಂತ ವರದಿ ಸೋಮವಾರಪೇಟೆ:

ರಸ್ತೆ ಅವ್ಯವಸ್ಥೆ ಖಂಡಿಸಿ ಮಂಡಲ ಬಿಜೆಪಿ ಬಾಳೆಗಿಡ ನೆಟ್ಟು, ರಸ್ತೆ ತಡೆ ನಡೆಸಿ, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರ ನಡೆದಿದೆ.

ಸೋಮವಾರಪೇಟೆ ಅಲೆಕಟ್ಟೆ ರಸ್ತೆಯ ಮೂಲಕ ಹಾದುಹೋಗುವ ಕೂತಿ,ತೋಳೂರು ಶೆಟ್ಟಳ್ಳಿ ರಾಜ್ಯಹೆದ್ದಾರಿ 20ಕೋಟಿ ವೆಚ್ಚದಲ್ಲಿ ಡಾಂಬರೀಕರಣ ಹಾಗೂ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾರ್ಯಕ್ಕೆ ಕಳೆದ ಒಂದು ವರ್ಷದ ಹಿಂದೆ ಚಾಲನೆ ನೀಡಲಾಗಿದ್ದು ಅಂದಿನಿಂದಲೂ ಆಮೆಗತಿಯಲ್ಲಿ ನಡೆಯುತ್ತಿತ್ತಾದರೂ ಮಳೆಗಾಲದ ನಂತರ ಸಂಪೂರ್ಣ ನಿಂತುಹೋಗಿದೆ.

ರಸ್ತೆಗಳನ್ನು ಅಗೆದು ಹಾಕಿರುವುದರಿಂದ ವಾಹನಗಳು ಚಲಿಸಲು ತೊಂದರೆ ಆಗುತ್ತಿರುವುದರೊಂದಿಗೆ ಇಡೀ ವಾತಾವರಣ ಧೂಳುಮಯವಾಗಿದೆ ರಸ್ತೆಯ ಅಕ್ಕಪಕ್ಕದ ಮನೆಯವರು ವಾಸಮಾಡಲು ಕಷ್ಟವಾಗಿದೆ ಎಂದು ಆರೋಪಿಸಿ ಇಂದು ಅಲೆಕಟ್ಟೆ ರಸ್ತೆಯ ಸಾಂದೀಪನಿ ಶಾಲೆ ಜಂಕ್ಷನ್ ಬಳಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಬಾಳೆಗಿಡನೆಟ್ಟು, ರಸ್ತೆತಡೆ ನಡೆಸಿದ್ದಾರೆ.

ಸ್ಥಳಕ್ಕೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಪ್ರತಿಭಟನಾ ಪಟ್ಟು ಹಿಡಿದ ಹಿನ್ನಲೆಯಲ್ಲಿ ತಡವಾಗಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಅಭಿಯಂತರ ಕುಮಾರ್ ರವರನ್ನು ಪ್ರತಿಭಟನಾಕಾರರು ತೀವ್ರತರಾಟೆಗೆ ತೆಗೆದುಕೊಂಡರು.

ಇದನ್ನೂ ಓದಿ:

ಈ ಸಂದರ್ಭ ಪ್ರತಿಕ್ರಿಯಿಸಿದ ಅಭಿಯಂತರರು ರಸ್ತೆ ನಿರ್ಮಾಣಕ್ಕೆ ಕೆಲವು ಮರಗಳು ತೊಡಕಾಗಿದ್ದು ಅರಣ್ಯ ಇಲಾಖೆಯ ಅನುಮತಿ ಸಿಕ್ಕಿಲ್ಲ ಅಲ್ಲದೆ ಗುತ್ತಿಗೆದಾರರಿಗೆ ಸ್ವಲ್ಪವೂ ಬಿಲ್ ಪಾವತಿ ಆಗದಿರುವುದರಿಂದ ಅವರು ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಈ ತಿಂಗಳ 20 ನೇ ತಾರೀಕಿನೊಳಗೆ ಕಾಮಗಾರಿ ಆರಂಭಿಸುವ ಭರವಸೆ ನೀಡಿದ್ದರಿಂದ ಪ್ರತಿಭಟನಾಕಾರರು ಪ್ರತಿಭಟನೆ ಕೈಬಿಟ್ಟು ನೀಡಿದ ಗಡುವಿನೊಳಗೆ ಕಾಮಗಾರಿ ನಡೆಯದಿದ್ದರೆ ಉಗ್ರಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಮಹೇಶ್ ತಿಮ್ಮಯ್ಯ,ಮಂಡಲ ಅಧ್ಯಕ್ಷ ಗೌತಮ್,ಜಿಲ್ಲಾ ಉಪಾಧ್ಯಕ್ಷ ಮನುಕುಮಾರ್ ರೈ,ಹಾನಗಲ್ಲು ಗ್ರಾಮ ಪಂಚಾಯತಿ ಅಧ್ಯಕ್ಷ ಯಶವಂತ,ಉಪಾಧ್ಯಕ್ಷೆ ರೇಣುಕಾ ವೆಂಕಟೇಶ್,ಚೌಡ್ಲು ಪಂಚಾಯಿತಿ ಅಧ್ಯಕ್ಷೆ ಗೀತಾ,ಪಕ್ಷದ ಪ್ರಮುಖರುಗಳಾದ ಗೋಪಾಲ್,ಅಭಿಮನ್ಯು ಕುಮಾರ್, ಉದಯ್,ಶರತ್, ದರ್ಶನ್,ಅಜೀಶ್ ಹಾಗೂ ಮುಂತಾದವರು ಹಾಜರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !