ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರ್ಕಾರದ ವಿವಾದಿತ ‘ಜಿ ರಾಮ್ ಜಿ’ ಕಾಯ್ದೆಯ ವಿರುದ್ಧ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಈಗ ನೇರ ಸಂಘರ್ಷಕ್ಕೆ ಇಳಿದಿದೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕಾಯ್ದೆಯನ್ನು ರಾಜ್ಯದಲ್ಲಿ ತೀವ್ರವಾಗಿ ವಿರೋಧಿಸಲು ತೀರ್ಮಾನಿಸಲಾಗಿದ್ದು, ಕೇಂದ್ರದ ವಿರುದ್ಧ ದ್ವಿಮುಖ ಹೋರಾಟಕ್ಕೆ ವೇದಿಕೆ ಸಿದ್ಧಪಡಿಸಲಾಗಿದೆ.
ರಾಜ್ಯ ಅಡ್ವೊಕೇಟ್ ಜನರಲ್ ಅವರ ಕಾನೂನು ಅಭಿಪ್ರಾಯವನ್ನು ಪಡೆದಿರುವ ಕ್ಯಾಬಿನೆಟ್, ಈ ಕಾಯ್ದೆಯ ಸಾಂವಿಧಾನಿಕತೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸಲು ನಿರ್ಧರಿಸಿದೆ. ಇದರೊಂದಿಗೆ, ಜನರ ಬಳಿಗೆ ಹೋಗುವ ಮೂಲಕ ‘ಜನತಾ ನ್ಯಾಯಾಲಯ’ದಲ್ಲಿ ಕೇಂದ್ರದ ವಿರುದ್ಧ ರಾಜಕೀಯ ಅಭಿಯಾನವನ್ನು ತೀವ್ರಗೊಳಿಸಲು ಸಚಿವರು ಸಮ್ಮತಿಸಿದ್ದಾರೆ.
ಇದೇ ವೇಳೆ, ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಹುಬ್ಬಳ್ಳಿಯ ಮಹಿಳೆಯ ವಿವಸ್ತ್ರಗೊಳಿಸಿದ ಪ್ರಕರಣದ ಬಗ್ಗೆ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಗೃಹ ಸಚಿವ ಜಿ. ಪರಮೇಶ್ವರ್ ಅವರು ಘಟನೆಯ ಸಂಪೂರ್ಣ ವಿವರ ಮತ್ತು ಈವರೆಗೆ ಕೈಗೊಂಡಿರುವ ಕ್ರಮಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ವರದಿ ಸಲ್ಲಿಸಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಭೆಯಲ್ಲಿ ಚರ್ಚಿಸಲಾಯಿತು.

