ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ಆಲಪ್ಪುಳದಲ್ಲಿ ಸಂಭವಿಸಿದ ರಸ್ತೆ ಅಪಘಾತವೊಂದು ಅಚ್ಚರಿಯ ಸಂಗತಿಯನ್ನು ಬೆಳಕಿಗೆ ತಂದಿದೆ. ಅಪಘಾತದಲ್ಲಿ ಮೃತಪಟ್ಟ ಭಿಕ್ಷುಕನೊಬ್ಬನ ಬಳಿ ₹4.5 ಲಕ್ಷಕ್ಕೂ ಅಧಿಕ ನಗದು ಪತ್ತೆಯಾಗಿದ್ದು, ಸ್ಥಳೀಯರನ್ನು ಬೆಚ್ಚಿಬೀಳುವಂತೆ ಮಾಡಿದೆ. ಚಾರುಮ್ಮೂಟ್ ಹಾಗೂ ಆಲಪ್ಪುಳ ಸುತ್ತಮುತ್ತ ಪರಿಚಿತ ಮುಖವಾಗಿದ್ದ ಈ ವ್ಯಕ್ತಿ, ದಿನನಿತ್ಯ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದವನಾಗಿದ್ದ.
ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಯಾವುದೇ ವಿವರಗಳನ್ನು ಬಹಿರಂಗಪಡಿಸದೆ, ಆತ ಆಸ್ಪತ್ರೆಯಿಂದ ತಾನಾಗಿಯೇ ಹೊರನಡೆದಿದ್ದಾನೆ. ಆಸ್ಪತ್ರೆ ದಾಖಲೆಗಳ ಪ್ರಕಾರ, ಆತ ತನ್ನ ಹೆಸರನ್ನು ಅನಿಲ್ ಕಿಶೋರ್ ಎಂದು ತಿಳಿಸಿದ್ದಾನೆ.
ಇದನ್ನೂ ಓದಿ: KITCHEN TIPS | ಬೆಳಗ್ಗೆ ಮಾಡಿದ ಚಪಾತಿ ಮಧ್ಯಾಹ್ನದವರೆಗೂ ಸಾಫ್ಟ್ ಆಗಿರಬೇಕಾ? ಹೀಗೆ ಮಾಡಿ
ಮರುದಿನ ಬೆಳಿಗ್ಗೆ, ಅಂಗಡಿಯೊಂದರ ಎದುರು ಆತನ ಶವ ಪತ್ತೆಯಾಗಿದ್ದು, ನಂತರ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು. ಶವದ ಬಳಿ ಕಂಡುಬಂದ ಪಾತ್ರೆಯನ್ನು ಪೊಲೀಸರು ವಶಪಡಿಸಿಕೊಂಡು ಪರಿಶೀಲನೆ ನಡೆಸಿದರು. ಸ್ಥಳೀಯ ಪಂಚಾಯತ್ ಸದಸ್ಯರ ಸಮ್ಮುಖದಲ್ಲಿ ತೆರೆಯಲಾದ ಪಾತ್ರೆಯಲ್ಲಿ ಪ್ಲಾಸ್ಟಿಕ್ ಡಬ್ಬಿಗಳಲ್ಲಿ ಸಂಗ್ರಹಿಸಿದ್ದ ₹4.5 ಲಕ್ಷಕ್ಕಿಂತ ಹೆಚ್ಚು ನಗದು ಪತ್ತೆಯಾಗಿದೆ. ಇದರಲ್ಲಿ ನಿಷೇಧಿತ ₹2,000 ನೋಟುಗಳು ಹಾಗೂ ಕೆಲವು ವಿದೇಶಿ ಕರೆನ್ಸಿಯೂ ಸೇರಿವೆ.
ಮೃತನ ಕುಟುಂಬ ಸದಸ್ಯರು ಯಾರು ಮುಂದೆ ಬಾರದಿದ್ದರೆ, ಹಣವನ್ನು ನ್ಯಾಯಾಲಯದ ವಶಕ್ಕೆ ಒಪ್ಪಿಸಲಾಗುವುದು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

