Friday, October 24, 2025

ರಂಗೇರುತ್ತಿದೆ ಬಿಹಾರ ವಿಧಾನಸಭಾ ಚುನಾವಣಾ ಅಖಾಡ: ಮೊದಲ ಹಂತದ ಕಣದಲ್ಲಿದ್ದಾರೆ 1314 ಅಭ್ಯರ್ಥಿಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ನಾಮಪತ್ರ ವಾಪಸ್ ಪಡೆಯುವ ಅವಧಿ ಮುಕ್ತಾಯವಾಗಿದ್ದು, ಒಟ್ಟಾರೆ 121 ವಿಧಾಸಭಾ ಕ್ಷೇತ್ರಗಳಲ್ಲಿ ಒಟ್ಟು 1 ಸಾವಿರದ 314 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಈ ಹಂತದಲ್ಲಿ 61 ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂಪಡೆದಿದ್ದಾರೆ. 18 ಜಿಲ್ಲೆಗಳಲ್ಲಿ ಹರಡಿರುವ ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು 1 ಸಾವಿರದ 690 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರು. ಆ ಪೈಕಿ 1 ಸಾವಿರದ 375 ನಾಮಪತ್ರಗಳುಸಿಂಧುವಾಗಿದ್ದವು.

ಮೊದಲ ಹಂತಕ್ಕೆ ನವಂಬರ್ 6 ರಂದು ಮತದಾನ ನಡೆಯಲಿದೆ. ಈ ಮಧ್ಯೆ ಎರಡನೇ ಹಂತದಲ್ಲಿ 20 ಜಿಲ್ಲೆಗಳ ವ್ಯಾಪ್ತಿಯ 122 ವಿಧಾನಸಭಾ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆ ಅವಧಿ ಮುಕ್ತಾಯಗೊಂಡಿದೆ. ಇಂದು ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆಯಲಿದ್ದು, ನಾಮಪತ್ರಗಳನ್ನು ವಾಪಸ್ ಪಡೆಯಲು ಇದೇ 23 ಕೊನೆಯ ದಿನವಾಗಿದೆ.

ಏತನ್ಮಧ್ಯೆ, ಬಿಹಾರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಮತದಾನದ ಪೂರ್ವ ದಿನ ಮತ್ತು ಮತದಾನದ ದಿನದಂದು ಪ್ರಕಟವಾಗುವ ಎಲ್ಲಾ ಮುದ್ರಣ ಜಾಹೀರಾತುಗಳಿಗೆ ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣಾ ಸಮಿತಿಯಿಂದ ಪೂರ್ವ ಪ್ರಮಾಣೀಕರಣವನ್ನು ಪಡೆಯುವಂತೆ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ನಿರ್ದೇಶನ ನೀಡಿದೆ. ನ್ಯಾಯಯುತ ಪ್ರಚಾರ ವಾತಾವರಣವನ್ನು ಖಚಿತಪಡಿಸಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆಯೋಗ ಹೇಳಿದೆ.

error: Content is protected !!